ಮಹಾರಾಷ್ಟ್ರ ವಿಧಾನಸಭೆಯಿಂದ 12 ಬಿಜೆಪಿ ಶಾಸಕರನ್ನ ಅಮಾನತು ಮಾಡಿರುವುದು ಸಂವಿಧಾನ ಬಾಹಿರ ಎಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಒಂದು ವರ್ಷಗಳವರೆಗೆ ಅಮಾನತು ಮಾಡಿದ್ದ ಸ್ಪೀಕರ್ ಆದೇಶವನ್ನ ರದ್ದು ಮಾಡಿದೆ.
ಕಳೆದ ವರ್ಷ ಜುಲೈ 6 ರಂದು ವಿಧಾನಸಭೆಯಲ್ಲಿ ಸ್ಪೀಕರ್ ವಿರುದ್ಧ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸಲಾಗಿತ್ತು.
ಇದರ ವಿರುದ್ಧ ಬಿಜೆಪಿಯ 12 ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಸುಪ್ರೀಂ ಆದೇಶವೇನು?
ಇಂದು ಆದೇಶ ನೀಡಿರುವ ಕೋರ್ಟ್, ಶಾಸಕರನ್ನ ಒಂದಕ್ಕಿಂತ ಹೆಚ್ಚು ಅಧಿವೇಶನಗಳಿಂದ ಅಮಾನತು ಮಾಡುವುದು ಸದನದ ಅಧಿಕಾರದಲ್ಲಿಲ್ಲ. ಹೀಗೆ ಮಾಡುವುದು ಸಂವಿಧಾನ ಬಾಹೀರ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಮಾತ್ರವಲ್ಲ ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸುವುದು ಉಚ್ಚಾಟನೆಗಿಂತ ಕೆಟ್ಟದಾಗಿದೆ. ಅದು ಇಡೀ ಕ್ಷೇತ್ರಕ್ಕೆ ನೀಡಿದ ಶಿಕ್ಷೆಯಾಗುತ್ತದೆ ಎಂದು ಜಸ್ಟೀಸ್ ಎಎಂ ಖಾನ್ವಿಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅಮಾನತು ಮಾಡಿರೋದ್ರಿಂದ ಶಾಸಕರು ಸದನದ ಕಲಾಪದಲ್ಲಿ ಇರುವುದಿಲ್ಲ. ಪರಿಣಾಮ ಆ ಕ್ಷೇತ್ರದ ಪರವಾಗಿ ಕಲಾಪದ ವೇಳೆ ಯಾರೂ ಇಲ್ಲದಂತಾಗುತ್ತದೆ. ಈ ಮೂಲಕ ಇಡೀ ಕ್ಷೇತ್ರವನ್ನೇ ಶಿಕ್ಷಿಸಿದಂತಾಗುತ್ತದೆಯೇ ಹೊರತು, ಸದಸ್ಯರನ್ನಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಇನ್ನು ಮಹಾರಾಷ್ಟ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಉತ್ತರ ಸಲ್ಲಿಸಲು ಕಾಲಾವಕಾಶ ಕೇಳಿದೆ. ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ.
Discussion about this post