ಮೈಸೂರು: ವಕೀಲೆ ಚಂದ್ರಕಲಾ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದು ಮೃತರ ಪೋಷಕರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.
ರಾಮಕೃಷ್ಣನಗರದ ನಿವಾಸಿ ಚಂದ್ರಕಲಾ(32) ಆತ್ಮಹತ್ಯೆ ಮಾಡಿಕೊಂಡವರು. ಇವರು 2019ರಲ್ಲಿ ರಾಮಕೃಷ್ಣ ನಗರ ನಿವಾಸಿ ವಿಚ್ಛೇದಿತ ಪ್ರದೀಪ್ ಎಂಬವವರನ್ನು 2019ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ಆರು ತಿಂಗಳ ಒಂದು ಮಗು ಕೂಡ ಇತ್ತು ಎನ್ನಲಾಗಿದೆ.
ಇಂದು ಬೆಳಗಿನ ಜಾವ ನಾಲ್ಕು ಮೂವತ್ತರ ಸುಮಾರಿಗೆ ಮೃತ ಚಂದ್ರಕಲಾ ಪತಿ ಆಕೆಯ ಪೋಷಕರಿಗೆ ಕರೆ ಮಾಡಿ ಮನೆಯ ಬಳಿ ಬರುವಂತೆ ತಿಳಿಸಿದ್ದ. ಬಳಿಕ 6ಗಂಟೆಯ ಸುಮಾರಿಗೆ ಅವರ ನಿವಾಸಕ್ಕೆ ಸಮೀಪವಿರುವ ಖಾಸಗಿ ಆಸ್ಪತ್ರೆಯ ಬಳಿ ಬರಲು ಹೇಳಿದ್ದ. ಇದರಿಂದ ಅನುಮಾನಗೊಂಡ ಮೃತ ಚಂದ್ರಕಲಾ, ಪೋಷಕರು ಇದು ಆತ್ಮಹತ್ಯೆಯಲ್ಲ, ಆಕೆಯ ಅತ್ತೆ-ಮಾವ, ಮತ್ತಾಕೆಯ ಪತಿ ಸೇರಿ ಕೊಲೆ ಮಾಡಿದ್ದಾರೆ. ಅವರು ವರದಕ್ಷಿಣೆಗಾಗಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕುವೆಂಪುನಗರ ಠಾಣೆಯ ಇನ್ಸ್ಪೆಕ್ಟರ್ ಚಂದ್ರಕಲಾ ಪತಿ ಮತ್ತು ಮಾವನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಅತ್ತೆ ಪರಾರಿಯಾಗಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಉಮೇಶ್ ಅವರು ಸಹೋದ್ಯೋಗಿಯ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
Discussion about this post