ಬೆಂಗಳೂರು: ಭಾರತ, ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಸಜ್ಜಾಗಿದೆ. ಇಂದಿನಿಂದ ದೇಶಾದ್ಯಂತ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ. ರಾಜ್ಯದಲ್ಲೂ ಮಕ್ಕಳಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಇಂದು ಬೆಳಗ್ಗೆ 9:30ಕ್ಕೆ ಮಕ್ಕಳ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಸಿಎಂ ಅಧಿಕೃತ ಚಾಲನೆ ನೀಡಲಿದ್ದಾರೆ.
ಇಂದಿನಿಂದ ದೇಶಾದ್ಯಂತ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ
ಕೊರೊನಾ ವಿಚಾರದಲ್ಲಿ ಪೋಷಕರ ಕನಸು ನನಸಾಗಿದೆ. ಕೇಂದ್ರ ಸರ್ಕಾರ ಘೋಷಿಸಿದಂತೆ ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್‌ನ Covaxin ತುರ್ತು ಬಳಕೆಯ ಅಧಿಕಾರವನ್ನು ಕೇಂದ್ರಕ್ಕೆ ನೀಡಿದೆ. ಆದ್ರೆ ಕೇಂದ್ರ ಸರ್ಕಾರ ಆರಂಭದಲ್ಲಿ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ನಿರ್ಧರಿಸಿದ್ದು, ಭರ್ಜರಿ ಸಿದ್ಧತೆ ನಡೆಸಿದೆ. 15 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ಸಜ್ಜಾಗುತ್ತಿದ್ದಂತೆ, ನಿನ್ನೆ ಸಂಜೆಯವರೆಗೆ CoWIN ಅಪ್ಲಿಕೇಶನ್ಗೆ ಸುಮಾರು ಆರು ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳೊಂದಿಗೆ ಲಸಿಕಾ ಅಭಿಯಾನ ನಡೆಯಲಿದೆ.
ರಾಜ್ಯಗಳಲ್ಲಿ ಸಿದ್ಧತೆ
- ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳಿಗೆ ಲಸಿಕೆ ಹಾಕಲು 159 ಕೇಂದ್ರ
- ಸರ್ಕಾರಿ ಆಸ್ಪತ್ರೆಗಳು, ಡಿಸ್ಪೆನ್ಸರಿಗಳು ಹಾಗೂ ಪಾಲಿಕ್ಲಿನಿಕ್‌ಗಳು
- ದೆಹಲಿ ಸರ್ಕಾರಿ ಮತ್ತು ಪುರಸಭೆಯ ಶಾಲೆಗಳಲ್ಲಿ ಲಸಿಕಾ ಕೇಂದ್ರ
- ಶಾಲೆಗಳಲ್ಲಿ ಲಸಿಕೆ ಕೇಂದ್ರಗಳಿಗೆ ವಿಶೇಷ ಮಾರ್ಗಸೂಚಿ ಪಾಲನೆ
- ಪ್ರತಿ ಶಾಲೆಗೆ ನೋಡಲ್ ಉಸ್ತುವಾರಿಯ ನೇಮಕ ಮಾಡಲಾಗಿದೆ
- ವ್ಯಾಕ್ಸಿನೇಷನ್ ಪುರಾವೆಗಾಗಿ ಶಾಲಾ ಗುರುತಿನ ಚೀಟಿ ಕಡ್ಡಾಯ
- ಹರಿಯಾಣದಲ್ಲಿ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಕೋವ್ಯಾಕ್ಸಿನ್ ಲಸಿಕೆ
- ಕೇರಳದಲ್ಲಿ ಮಕ್ಕಳ ಲಸಿಕಾ ಕೇಂದ್ರದಲ್ಲಿ ಗುಲಾಬಿ ಬೋರ್ಡ್ ಬಳಕೆ
- ಅಸ್ಸಾಂನ 500 ಶಾಲೆಗಳಲ್ಲಿ 18.25 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ಕ್ರಮ
- ದಿಬ್ರುಗಢ್ ಜಿಲ್ಲೆಯ ದುಲಿಯಾಜನ್‌ನಲ್ಲಿ ಅಸ್ಸಾಂ ಸಿಎಂ ಚಾಲನೆ
- ತಮಿಳುನಾಡಿನಲ್ಲಿ 33 ಲಕ್ಷ ಮಕ್ಕಳನ್ನು ಕೋವಿಡ್ ಲಸಿಕೆ ನೀಡಲಾಗ್ತಿದೆ
ಇತ್ತ ರಾಜ್ಯದಲ್ಲೂ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ರಾಜ್ಯ ಸರ್ಕಾರ ಅಗತ್ಯ ತಯಾರಿ ನಡೆಸಿದೆ. ಬೆಳಗ್ಗೆ 9:30ಕ್ಕೆ ಲಸಿಕಾ ಅಭಿಯಾನಕ್ಕೆ ಭೈರವೇಶ್ವರನಗರದ ಬಿಬಿಎಂಪಿ ಶಾಲೆಯಲ್ಲಿ ಸಿಎಂ ಚಾಲನೆ ನೀಡಲಿದ್ದಾರೆ. ಒಟ್ನಲ್ಲಿ ಕಡೆಗೂ ಪೋಷಕರ ಆತಂಕ ದೂರಾಗಿದೆ. ಮಕ್ಕಳಿಗೆ ಇಂದಿನಿಂದ ಲಸಿಕೆ ನೀಡಲಾಗ್ತಿದೆ. ಕೊರೊನಾದಿಂದ ಮಕ್ಕಳನ್ನ ರಕ್ಷಿಸಲು ಕೋವ್ಯಾಕ್ಸಿನ್ ರಕ್ಷಣಾ ಕವಚವಾಗಲಿದೆ.
Discussion about this post