ಹಲವು ಸವಾಲುಗಳೊಂದಿಗೆ ಸೆಂಚೂರಿಯನ್ ಟೆಸ್ಟ್ ಗೆದ್ದ ಭಾರತ, ಇದೀಗ ಜೋಹಾನ್ಸ್ಬರ್ಗ್ ಟೆಸ್ಟ್ಗೆ ಪ್ರಿಪೇರ್ ಆಗ್ತಿದೆ. ಆದರೆ ಮೊದಲ ಟೆಸ್ಟ್ ಗೆಲುವಿನಲ್ಲಿ ಇವರ ಕೊಡುಗೆ ಅಪಾರ ಎಂದರೆ, ತಪ್ಪಾಗಲ್ಲ. ಯಾರು ಈ ಗೆಲುವಿನ ಕಾರಣಕರ್ತರು.. ಇಷ್ಟಕ್ಕೂ ಅವರು ಮಾಡಿದ್ದಾದರೂ ಏನು?
ಸೆಂಚೂರಿಯನ್ ಟೆಸ್ಟ್ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ, ಅದಕ್ಕೂ ಮೊದಲು ಇದ್ದ ವಾತಾವರಣವೇ ಬೇರೆ. ನಾಯಕತ್ವ ಬದಲಾವಣೆಯಿಂದ ಕೊಹ್ಲಿ, ಬಿಸಿಸಿಐ ನಡುವೆ ರೋಷಾಗ್ನಿಯೇ ಎದ್ದಿತ್ತು. ಗೊಂದಲ, ವಿವಾದ, ವೈಮನಸ್ಸು, ಆಟಗಾರರಲ್ಲಿ ಕಾಣದ ಲವಲವಿಕೆ, ಎಲ್ಲವೂ ಸೌತ್ ಆಫ್ರಿಕಾ ಸರಣಿ ಮೇಲೆ ಪರಿಣಾಮ ಬೀರುತ್ತೆ ಎಂದೇ ಊಹಿಸಲಾಗಿತ್ತು. ಆದ್ರೆ ಇದ್ಯಾವುದನ್ನೂ ಸರಣಿ ಮೇಲೆ ಮತ್ತು ತಂಡದ ಮೇಲೆ ಪ್ರಭಾವ ಬೀರದಂತೆ ನೋಡಿಕೊಂಡ್ರು, ಹೆಡ್ ಕೋಚ್ ರಾಹುಲ್ ದ್ರಾವಿಡ್.
ಕೊಹ್ಲಿಯ ಮೈಂಡ್ಸೆಟ್ ಬದಲಿಸಿದ್ರು ಕೋಚ್ ದ್ರಾವಿಡ್..!
ಹೌದು.. ಏಕದಿನ ನಾಯಕತ್ವದಿಂದ ದಿಢೀರ್ ಆಗಿ ಕಿತ್ತಾಗ್ತಿದ್ದಂತೆ, ಕೊಹ್ಲಿ ಮನಸ್ಸೇ ಬದಲಾಗಿ ಹೋಗಿತ್ತು. ಮಾನಸಿಕವಾಗಿ ಕುಗ್ಗುವ ಹಂತಕ್ಕೂ ಹೋಗಿದ್ರು. ಆದರೆ ದ್ರಾವಿಡ್ ಕ್ಯಾಪ್ಟನ್ ಕೊಹ್ಲಿಯ ಮೈಂಡ್ಸೆಟ್ ಡೈವರ್ಟ್ ಮಾಡುವಲ್ಲಿ ಯಶಸ್ಸು ಕಂಡರು. ವಿವಾದವನ್ನೂ ತಣ್ಣಗಾಗುವಂತೆ ಮಾಡಿಬಿಟ್ರು. ಆ ಮೂಲಕ ದಿಟ್ಟ ಹೆಜ್ಜೆ ಇಟ್ಟ ದ್ರಾವಿಡ್, ಕೊಹ್ಲಿಗೆ ಮಾತ್ರವಲ್ಲ, ಪ್ರತಿಯೊಬ್ಬ ಆಟಗಾರನ ಮೇಲೂ ಫೋಕಸ್ ಮಾಡಿ, ಆತ್ಮವಿಶ್ವಾಸ ಹೆಚ್ಚಿಸಿದ್ರು.
ಸೆಂಚೂರಿಯನ್ ಟೆಸ್ಟ್ಗೂ ಮುನ್ನ, ಪಂದ್ಯ ಗೆದ್ದ ನಂತರ..!
ಟೆಸ್ಟ್ಗೂ ಮುನ್ನ ಮತ್ತು ಟೆಸ್ಟ್ ಗೆದ್ದ ನಂತರ, ಪ್ರತಿ ಹಂತದಲ್ಲೂ ದ್ರಾವಿಡ್ ಆಟಗಾರರನ್ನ ವಿಶ್ವಾಸಕ್ಕೆ ತೆಗೆದುಕೊಂಡ್ರು. ಆಟಗಾರರು ಟ್ರ್ಯಾಕ್ ತಪ್ಪದಂತೆ ನೀಟಾಗಿ ನೋಡಿಕೊಂಡ್ರು. ಆಟಗಾರರು ತಮ್ಮ ಸಮಸ್ಯೆ ಹೇಳಿಕೊಳ್ಳುವ ಮೊದಲೇ, ದ್ರಾವಿಡ್ ಅದನ್ನು ಅರಿತು ಮೈಂಡ್ಸೆಟ್ಗೆ ತಕ್ಕಂತೆ ಅಪ್ರೋಚ್ ಮಾಡ್ತಿದ್ರು. ಮೋಟಿವೇಟ್ ಕೂಡ ಮಾಡ್ತಿದ್ರು. ಎಲ್ಲದಕ್ಕೂ ಮಿಗಿಲಾಗಿ, ಫುಲ್ಫ್ರೀಡಂ ಕೊಟ್ಟಿದ್ರು. ಇದೆಲ್ಲವನ್ನೂ ಅಭ್ಯಾಸದ ವೇಳೆ ಕಾಣಬಹುದು.
ಟೆಸ್ಟ್ ಪಂದ್ಯ ಗೆದ್ದ ನಂತರವೂ ಫುಲ್ ಫ್ರೀಡಂ ಕೊಟ್ಟ ವಾಲ್.!
ಟೆಸ್ಟ್ಗೂ ಮುನ್ನ ಮಾತ್ರವಲ್ಲ, ಗೆದ್ದ ನಂತರವೂ ದ್ರಾವಿಡ್ರಿಂದ ಎನ್ಕರೇಜ್ ನಿಂತಿಲ್ಲ. ಶಮಿ 200 ವಿಕೆಟ್, ಪಂತ್ 100 ಕ್ಯಾಚ್ ಪಡೆದ ಸಾಧನೆಯನ್ನ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದ್ರು. ಗೆದ್ದ ಬಳಿಕ ಅಶ್ವಿನ್, ಪೂಜಾರ, ಸಿರಾಜ್ ಹೋಟೆಲ್ ಸಿಬ್ಬಂದಿಯೊಂದಿಗೆ ಡ್ಯಾನ್ಸ್ ಮಾಡಿದ್ದು ಕೂಡ ಇಲ್ಲಿ ಆಕರ್ಷಿಸಿತು. ಸದಾ ಗಂಭೀರತೆಯಿಂದ ಕೂಡಿದ್ದ ಡ್ರೆಸ್ಸಿಂಗ್ ರೂಮ್ನ ವಾತಾವರಣವನ್ನೇ ಬದಲಾಯಿಸಿದ ಕ್ರೆಡಿಟ್, ದ್ರಾವಿಡ್ಗೆ ಸಲ್ಲಲೇಬೇಕು. ಇದನ್ನೇ ಕೆ.ಎಲ್.ರಾಹುಲ್ ಕೂಡ ಹೇಳಿದ್ದಾರೆ.
‘ದ್ರಾವಿಡ್ರಿಂದ ಕಲಿಯುವುದಿದೆ’
‘ರಾಹುಲ್ ದ್ರಾವಿಡ್ ಅವರಂಥ ಆಟಗಾರರೊಂದಿಗೆ ಆಟದ ಕುರಿತು ಸಾಕಷ್ಟು ಕಲಿಯಬಹುದು. ಬ್ಯಾಟಿಂಗ್ ಟೆಕ್ನಿಕ್ಸ್ ಬಗ್ಗೆ ಕಲಿಯಬಹುದು. ಡ್ರೆಸ್ಸಿಂಗ್ ಕೊಠಡಿಯಲ್ಲಿ ದ್ರಾವಿಡ್ರನ್ನ ಹೊಂದಿರುವುದಕ್ಕೆ ನಾವು ಮಾಡಿದ ಅದೃಷ್ಟ. ಡ್ರೆಸ್ಸಿಂಗ್ ರೂಮ್ನಲ್ಲಿ ಶಾಂತ ವಾತಾವರಣ ಹಾಗೂ ಸಂಯೋಜನೆ ತಂದುಕೊಡುತ್ತಾರೆ. ಸರಣಿಗೂ ಮುನ್ನ ಅವರು ನೆಟ್ಸ್‌ನಲ್ಲಿ ಹಾಗೂ ತರಬೇತಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಇದನ್ನೇ’
ಕೆ.ಎಲ್.ರಾಹುಲ್, ಕ್ರಿಕೆಟಿಗ
ಹೆಡ್ಕೋಚ್ ರಾಹುಲ್ ದ್ರಾವಿಡ್, ಸೈಲೆಂಟಾಗಿಯೇ ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆ ಮೂಲಕ ಭಾರತದ ಡ್ರೆಸ್ಸಿಂಗ್ ರೂಮ್ನ ವಾತಾವರಣ ಸಂಪೂರ್ಣ ಬದಲಾವಣೆಗೆ, ಶ್ರಮ ಹಾಕಿದ್ದಾರೆ. ದ್ರಾವಿಡ್ರ ಕೋಚಿಂಗ್ ಸ್ಟೈಲ್, ಎಲ್ಲರ ಪ್ರಶಂಸೆಗೂ ಕಾರಣವಾಗಿದೆ.
Discussion about this post