ಪಂಚರಾಜ್ಯಗಳ ಚುನಾವಣೆ ಬಿಸಿ ಏರ್ತಿದೆ. ಉತ್ತರ ಪ್ರದೇಶದಲ್ಲಿ ಕುರ್ಚಿಯಾಟ ಮುಂದುವರೆದಿದೆ. ಪಂಜಾಬ್ನಲ್ಲಿ ಕ್ಯಾಪ್ಟನ್ ತನ್ನ ಪಕ್ಷದ ಹುರಿಯಾಳುಗಳನ್ನ ಪ್ರಕಟಿಸಿದ್ದಾರೆ. ಇತ್ತ ಗೋವಾದಲ್ಲಿ ಕಳೆದ ಬಾರಿ ಕೈ ಸುಟ್ಕೊಂಡಿದ್ದ ಕಾಂಗ್ರೆಸ್, ಈ ಸಲ ಚುನಾವಣೆ ಮುನ್ನವೇ ಆಣೆ ಪ್ರಮಾಣದ ಮೊರೆ ಹೋಗಿದೆ.
ಸಮೀಕ್ಷೆಗಳಿಗೆ ಬೀಳುತ್ತಾ ಬ್ರೇಕ್..?
ವಿವಿಧ ಸುದ್ದಿ ವಾಹಿನಗಳಲ್ಲಿ ಪ್ರಸಾರ ಆಗ್ತಿರುವ ಚುನಾವಣೆ ಸಮೀಕ್ಷೆಗಳಿಗೆ ಬ್ರೇಕ್ ಹಾಕುವಂತೆ ಸಮಾಜವಾದಿ ಪಕ್ಷ ಆಗ್ರಹಿಸಿದೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಅಂತ ಹೇಳಿದೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ಪತ್ರ ಬರೆದಿರುವ ಉತ್ತರ ಪ್ರದೇಶ ಎಸ್ಪಿ ರಾಜ್ಯಾಧ್ಯಕ್ಷ ನರೇಶ್ ಉತ್ತಮ್, ಜನಮತ ಸಮೀಕ್ಷೆಗಳು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತವೆ ಅಂತ ಹೇಳಿದೆ.
ಪಕ್ಷಾಂತರ ಪರ್ವ
ಸಮಾಜವಾದಿ ಪಕ್ಷದ ಪ್ರಭಾವಿ ನಾಯಕ ಅಜಂಖಾನ್, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ತಮಗೆ ಜಾಮೀನು ನೀಡಬೇಕು ಅಂತ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಇದೇ ವೇಳೆ, ಪ್ರಚಾರ ಕಾರ್ಯಗಳಲ್ಲಿ ತಾವು ಪಾಲ್ಗೊಳ್ಳಲು ಸಾಧ್ಯವಾಗದಂತೆ ಬಿಜೆಪಿ ಯತ್ನಿಸ್ತಿದೆ ಅಂತ ಆರೋಪಿಸಿದ್ದಾರೆ.
ಇನ್ನೊಂದ್ಕಡೆ, ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮತ್ತೋರ್ವ ಬಿಜೆಪಿ ಶಾಸಕ ಪಕ್ಷಕ್ಕೆ ಗುಡ್ ಬೈ ಹೇಳಿ ಸಮಾಜವಾದಿ ಪಕ್ಷ ಸೇರ್ಪಡೆ ಆಗಿದ್ದಾರೆ. ಈ ಬಾರಿ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ನಡೆಯಿಂದ ಆಗ್ರಾದ ಫತೇಹಾಬಾದ್ ಬಿಜೆಪಿ ಶಾಸಕ ಜಿತೇಂದ್ರ ವರ್ಮಾ ಪಕ್ಷ ತೊರೆದಿದ್ದಾರೆ.
22 ಅಭ್ಯರ್ಥಿಗಳ ಪಟ್ಟಿ ಪ್ರಕಟ
ಇತ್ತ, ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ಲೋಕ ಕಾಂಗ್ರೆಸ್ನ 22 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ. ಕ್ಯಾಪ್ಟನ್ ಪಟಿಯಾಲ ಅರ್ಬನ್ ಕ್ಷೇತ್ರದಿಂದ ಕಣಕ್ಕಿಳಿಯೋದಾಗಿ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಅಂತ ಕ್ಯಾಪ್ಟನ್ ಘೋಷಿಸಿದ್ದಾರೆ. ಇದೇ ಮೊದಲ ಬಾರಿಗೆ ಅಮರಿಂದರ್ ಕಾಂಗ್ರೆಸ್ ತೊರೆದು ಅಖಾಡಕ್ಕೆ ಇಳಿದಿದ್ದಾರೆ.
ಆಣೆ ಪ್ರಮಾಣ
ಗೋವಾದಲ್ಲಿ ಕಳೆದ ಗೆದ್ದ ಶಾಸಕರು ಬಳಿಕ ಕೈಕೊಟ್ಟು ಬೇರೆ ಪಕ್ಷಕ್ಕೆ ಜಿಗಿದ ಪರಿಣಾಮ ಕಾಂಗ್ರೆಸ್ ಹೊಸ ಹಾದಿ ತುಳಿದಿದೆ. ಈ ಬಾರಿ ಗೆದ್ದ ನಂತರ ಬೇರೆ ಪಕ್ಷ ಸೇರ್ಪಡೆ ಆಗಲ್ಲ ಎಂದು ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಳ್ಳುವ ತಂತ್ರ ನಡೆಸಿದೆ. ಇದಕ್ಕಾಗಿ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಆಣೆ ಪ್ರಮಾಣ ಮಾಡಿಸಿಕೊಂಡಿದೆ.
ಬಿಜೆಪಿ ತೊರೆದಿರುವ ಗೋವಾ ಮಾಜಿ ಸಿಎಂ ಲಕ್ಷ್ಮಿಕಾಂತ್ ಪರ್ಸೇಕರ್, ಮಾಂಡ್ರೆಮ್ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಲಕ್ಷ್ಮಿಕಾಂತ್ ಪರ್ಸೇಕರ್ 2014 ರಿಂದ 2017 ರವರೆಗೆ ಗೋವಾ ಸಿಎಂ ಆಗಿದ್ದರು. ಒಟ್ಟಾರೆ, ಐದು ರಾಜ್ಯಗಳಲ್ಲೂ ಚುನಾವಣೆ ಕಾವು ಹೆಚ್ತಿದ್ದು, ಮತದಾರನ ಮನಸ್ಸು ಗೆಲ್ಲಲು ಆನ್ಲೈನ್ ಸಭೆಗಳ ಮೊರೆ ಹೋಗಿದ್ದಾರೆ.
Discussion about this post