ಬೆಂಗಳೂರು: ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಹಲವಾರು ಸವಾಲುಗಳನ್ನ ಎದುರಿಸಿದ್ದಾಯ್ತು. ಇದೀಗ ರಾಜ್ಯದ ಜನರಿಗೆ ಉತ್ತಮ ಬಜೆಟ್ ನೀಡುವ ಚಾಲೆಂಜ್ ರಾಜ್ಯದ ದೊರೆಗೆ ಎದುರಾಗಿದೆ. ಹೀಗಾಗಿ ಈ ಸಾಲಿನ ಬಜೆಟ್ ಮಂಡಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ. ಬಜೆಟ್ ಅಖಾಡಕ್ಕೆ ಇಳಿಯೋ ಮುನ್ನ ಭಾರೀ ಅಭ್ಯಾಸದಲ್ಲಿ ತೊಡಗಿದೆ.
ರಾಜ್ಯದ ಜನರಿಗೆ ಬಂಪರ್ ಬಜೆಟ್ ನಿರೀಕ್ಷೆ
ಸಿಎಂ ಆದ್ಮೇಲೆ ಬಸವರಾಜ ಬೊಮ್ಮಾಯಿ ಮೊದಲ ಬಜೆಟ್ ಮಂಡಿಸಲಿದ್ದಾರೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಸಭೆಗಳ ಮೇಲೆ ಸಭೆಗಳನ್ನ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ವಾರದಿಂದ 2022-2023ನೇ ಸಾಲಿನ ಆಯವ್ಯಯ ಮಂಡನೆಗೆ ಬೇಕಾದ ಸಕಲ ತಯಾರಿಗಳನ್ನ ಸರ್ಕಾರ ಆರಂಭಿಸಲಿದೆ. ರಾಜ್ಯದ ಜನರ ನಿರೀಕ್ಷೆಗಳನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ತಮ್ಮ ಮೊದಲ ಬಜೆಟ್ ಕಾರ್ಯವನ್ನ ಆರಂಭಿಸಿದ್ದಾರೆ. ಹೀಗಾಗಿ ಮುಂದಿನ ವಾರದಿಂದ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಲಿದ್ದಾರೆ.
ಬೊಮ್ಮಾಯಿ ‘ಫಸ್ಟ್’ ಬಜೆಟ್
ಮುಂದಿನ ವಾರದಿಂದ ಬಜೆಟ್ ಬಗೆಗಿನ ಪೂರ್ವಭಾವಿ ಸಭೆಗಳು ಆರಂಭವಾಗಲಿವೆ. ರಾಜ್ಯದ ಶಕ್ತಿಭವನದಲ್ಲಿ ಸಿಎಂ ನೇತೃತ್ವದಲ್ಲಿ ಇಲಾಖಾವಾರು ಮೀಟಿಂಗ್‌ಗಳು ನಡೆಯಲಿವೆ. ಪ್ರತಿಯೊಂದು ಇಲಾಖೆಗಳ ಜೊತೆಗೆ ಬೊಮ್ಮಾಯಿ ಪ್ರತ್ಯೇಕ ಸಭೆಗಳನ್ನ ನಡೆಸಲಿದ್ದಾರೆ. ಪ್ರತಿದಿನ ಮೂರರಿಂದ ನಾಲ್ಕು ಇಲಾಖೆ ಅಧಿಕಾರಿಗಳ ಜೊತೆ ಆಯವ್ಯಯ ಕುರಿತು ಚರ್ಚೆಯನ್ನೂ ಮಾಡಲಿದ್ದಾರೆ. ಇದರ ಜೊತೆಗೆ ಹಿಂದಿನ ಬಜೆಟ್‌ನ ಯೋಜನೆಗಳ ಪ್ರಗತಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕೊನೆಯದಾಗಿ ಇಲಾಖಾವಾರು ಸಭೆ ಬಳಿಕ ಉತ್ತಮ ಬಜೆಟ್ ನೀಡಲು ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಕೊರೊನಾ ಸೋಂಕಿನ ಹಾವಳಿಯ ಮಧ್ಯೆ ಕೆಲ ಉದ್ಯಮಗಳು ನೆಲ ಕಚ್ಚಿವೆ. ಜೊತೆಗೆ ಬಡ ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜನರು ಬಜೆಟ್ ಬಗ್ಗೆ ಭಾರೀ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ, ರಾಜ್ಯದ ಜನರಿಗೆ ಬಂಪರ್ ಗಿಫ್ಟ್ ನೀಡುವ ಸಾಧ್ಯತೆ ಇದೆ. ಜೊತೆಗೆ 2023ರ ಸಾರ್ವತ್ರಿಕ ಚುನಾವಣೆ, ಬಿಬಿಎಂಪಿ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಈ ಸಲದ ಬಜೆಟ್‌ನ ಅಂತಿಮ ರೂಪುರೇಷೆ ತಯಾರಾಗೋ ಲಕ್ಷಣಗಳು ಗೋಚರಿಸುತ್ತಿವೆ.
Discussion about this post