ಉತ್ತರಪ್ರದೇಶ.. ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರಿಸೋ ಅತಿದೊಡ್ಡ ರಾಜ್ಯ ಇನ್ನು ಕೆಲವೇ ದಿನಗಳಲ್ಲಿ ಮಹಾ ಸಂಗ್ರಾಮಕ್ಕೆ ಸಜ್ಜಾಗಿ ನಿಂತಿದೆ. ಹೈವೋಲ್ಟೇಜ್ ಚುನಾವಣಾ ಕದನಕ್ಕೆ ಸಾಕ್ಷಿಯಾಗಲಿರೋ ಉತ್ತರಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗೇ ನಡೀತಿವೆ.
ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಪಕ್ಷಾಂತರ ಪರ್ವ ಬಿಜೆಪಿಯಲ್ಲಿ ಕಂಪನವನ್ನೇ ಸೃಷ್ಟಿಸಿದೆ. ಇದ್ರ ಬೆನ್ನಲ್ಲೇ ನಿನ್ನೆ ನಡೆದ ಸುದೀರ್ಘ ಮೀಟಿಂಗ್ನಲ್ಲಿ ಯುಪಿ ಮರುವಶಕ್ಕೆ ಭಾರೀ ರಣತಂತ್ರ ರೂಪಿಸಲಾಯ್ತು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ನಡೆದ ಸಿಇಸಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಚಿವ ಅನುರಾಗ್ ಠಾಕೂರ್, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು. ಸುದೀರ್ಘ 5 ಗಂಟೆಗಳ ಮ್ಯಾರಥಾನ್ ಸಭೆಯಲ್ಲಿ ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್ ಹಾಗೂ ಗೋವಾ ರಾಜ್ಯಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡೋದ್ರ ಜೊತೆಗೆ ಗೆಲುವಿಗೆ ರಣತಂತ್ರ ರೂಪಿಸಲಾಯ್ತು.
ಎನ್ಡಿಎ ಮಿತ್ರಪಕ್ಷಗಳ ಜೊತೆ ಬಿಜೆಪಿ ಮೀಟಿಂಗ್
ಇದೇ ವೇಳೆ ಉತ್ತರಪ್ರದೇಶದಲ್ಲಿ ಎನ್ಡಿಎ ಮಿತ್ರ ಪಕ್ಷಗಳಾದ ಅಪ್ನಾದಳ, ನಿಶಾದ್ ಪಾರ್ಟಿ ಮುಖ್ಯಸ್ಥರ ಜೊತೆಗೆ ಬಿಜೆಪಿ ವರಿಷ್ಠರು ಮೀಟಿಂಗ್ ಮಾಡಿದ್ರು. ಐದು ರಾಜ್ಯಗಳಲ್ಲಿ ಸೀಟು ಹಂಚಿಕೆ ಬಗ್ಗೆಯೂ ಚರ್ಚೆ ನಡೆಯಿತು. ಈ ಸಭೆಯಲ್ಲಿ ಅಪ್ನಾ ದಳ ಮುಖ್ಯಸ್ಥೆ ಅನುಪ್ರಿಯಾ ಪಟೇಲ್, ನಿಶಾದ್ ಪಾರ್ಟಿ ಮುಖ್ಯಸ್ಥ ಸಂಜಯ್ ನಿಶಾದ್ ಭಾಗಿಯಾಗಿದ್ರು. ಸಭೆ ಬಳಿಕ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಉತ್ತರಪ್ರದೇಶದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.
ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಎನ್ಡಿಎಯ ತಮ್ಮ ಮಿತ್ರಪಕ್ಷಗಳ ಜೊತೆ ಚುನಾವಣೆಗೆ ಇಳಿಯಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ನಾವು ಜೊತೆಯಾಗೇ ಸ್ಪರ್ಧಿಸಿದ್ದೆವು. ಈಗ 2022ರ ವಿಧಾನಸಭಾ ಚುನಾವಣೆಯಲ್ಲೂ ನಾವು ಜೊತೆಯಾಗೇ ಸ್ಪರ್ಧಿಸಲಿದ್ದೇವೆ. ಅಪ್ನಾದಳ ಹಾಗೂ ನಿಶಾದ್ ಪಾರ್ಟಿ ಜೊತೆ ನಾವು ಈ ಚುನಾವಣೆಯಲ್ಲಿ ಎನ್ಡಿಎ 403 ಸೀಟುಗಳಲ್ಲಿ ಸ್ಪರ್ಧೆ ಮಾಡೋ ಬಗ್ಗೆ ನಿರ್ಣಯ ಮಾಡಲಾಗಿದೆ.
ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
30 ಸ್ಟಾರ್ ಪ್ರಚಾರಕರ ಲಿಸ್ಟ್ ರಿಲೀಸ್ ಮಾಡಿದ ಬಿಜೆಪಿ
ಈ ಬಾರಿ ಭರ್ಜರಿ ಬಹುಮತದೊಂದಿಗೆ ಉತ್ತರಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ ಭಾರೀ ತಯಾರಿ ನಡೆಸ್ತಿದೆ. ಮೀಟಿಂಗ್ಗಳ ಮೀಟಿಂಗ್ ನಡೆಸ್ತಿರೋ ಕಮಲ ಪಾಳಯ ಪ್ರಚಾರಕ್ಕೆ 30 ಸ್ಟಾರ್ ಪ್ರಚಾರಕರ ಲಿಸ್ಟ್ ಕೂಡಾ ರಿಲೀಸ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್ ಸೇರಿದಂತೆ 30 ಸ್ಟಾರ್ ಪ್ರಚಾರಕರು ಮತದಾರರನ್ನು ಸೆಳೆಯಲಿದ್ದಾರೆ. ಜೊತೆಗೆ ಚುನಾವಣಾ ಆಯೋಗ ಕೊರೊನಾ ರೂಲ್ಸ್ ವಿಧಿಸಿರೋದ್ರಿಂದ ಹೈಬ್ರಿಡ್ ಪ್ರಚಾರಕ್ಕೆ ಹೆಚ್ಚು ಗಮನ ಹರಿಸಿದೆ.
ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿ ಮತದಾರರನ್ನು ಸೆಳೆಯಲು ಪ್ಲಾನ್ ಮಾಡಲಾಗಿದೆ. ಒಟ್ಟಿನಲ್ಲಿ ಫೆಬ್ರವರಿ 10ರಿಂದ ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
Discussion about this post