ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಕಳ್ಳರ ಕೈಚಳಕ ಮುಂದುವರೆದಿದೆ. ಇಷ್ಟು ದಿನ ಬೈಕ್, ಕಾರುಗಳನ್ನು ಕದಿಯುತ್ತಿದ್ದ ಖದೀಮರು ಇದೀಗ ಜೆಸಿಬಿಯನ್ನೇ ಎಗರಿಸಿ ಪರಾರಿಯಾಗಿದ್ದಾರೆ.
ಹೌದು ನಗರದ ಸುಬ್ರಹ್ಮಣ್ಯಪುರ ಬಳಿ ಇರುವ ಮಿಲ್ಕ್ ಕಾಲೋನಿ ಬಳಿ ಈ ಘಟನೆ ನಡೆದಿದ್ದು, ರಾಮಮೂರ್ತಿ ಎಂಬುವವರ ಒಡೆತನದಲ್ಲಿದ್ದ ಜೆಸಿಬಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಚಾಲಕನಾದ ಲಕ್ಷ್ಮಣ್ ಎಂಬಾತ ಮಿಲ್ಕ್ ಕಾಲೋನಿಯ ರಸ್ತೆ ಬದಿ ಜೆಸಿಬಿ ನಿಲ್ಲಿಸಿ ಮನೆಗೆ ತೆರಳಿದ್ದ. ಜನವರಿ 11ರ ರಾತ್ರಿ 10 ಗಂಟೆಯವರೆಗೂ ಜೆಸಿಬಿ ಇದ್ದ ಜಾಗದಲ್ಲೇ ಇತ್ತು. ಆದರೆ ಬೆಳಗಿನ ಜಾವ 4-30 ಸಮಯದಲ್ಲಿ ಜೆಸಿಬಿ ನಾಪತ್ತೆಯಾಗಿದೆ ಎನ್ನಲಾಗಿದೆ.
ಜೆಸಿಬಿಯ ಮಾಲೀಕರಾದ ರಾಮಮೂರ್ತಿ ಈ ಹಿಂದೆ ಆಂಧ್ರದ ಪ್ರತಾಪ್ ರೆಡ್ಡಿ ಎಂಬಾತನಿಂದ ಜೆಸಿಬಿಯನ್ನು ಖರೀದಿಸಿದ್ದರಂತೆ. ಸದ್ಯ ಜೆಸಿಬಿ ಇದ್ದಕ್ಕಿದ್ದಂತೆ ಮಾಯವಾಗಿದ್ದನ್ನು ಕಂಡು ಅವರು ಅವಕ್ಕಾಗಿದ್ದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
Discussion about this post