ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಭಜರಂಗಿ 2’ ಚಿತ್ರದ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ಮತ್ತು ಪೋಸ್ಟರ್ಗಳು ಭಾರಿ ಹೈಪ್ ಸೃಷ್ಟಿಸಿವೆ. ಅ.29ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಬುಧವಾರ (ಅ.20) ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ. ಸೂಪರ್ ನ್ಯಾಚುರಲ್ ಅಂಶಗಳನ್ನು ಹೊಂದಿರುವ ಈ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್ ಅನ್ನು ಈ ಟ್ರೇಲರ್ನಲ್ಲಿ ತೋರಿಸಲಾಗುವುದು. ಅದಕ್ಕೂ ಮುನ್ನ ಈ ಚಿತ್ರದ ವಿಲನ್ ಆರಕ ಪೋಸ್ಟರ್ ಸಖತ್ ಗಮನ ಸೆಳೆಯುತ್ತಿದೆ.
ನಾಯಕ ನಟ ಶಿವರಾಜ್ಕುಮಾರ್, ನಾಯಕಿ ಭಾವನಾ ಮೆನನ್ ಮಾತ್ರವಲ್ಲದೇ ಎಲ್ಲ ಪಾತ್ರಗಳ ಪೋಸ್ಟರ್ಗಳನ್ನು ತುಂಬ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವೇ ದಿನಗಳ ಹಿಂದೆ ಹಿರಿಯ ನಟಿ ಶ್ರುತಿ, ಖಳನಟ ಲೋಕಿ ಅವರ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೋರ್ವ ಖಳನಟ ಚೆಲುವರಾಜು ಅವರ ಪೋಸ್ಟರ್ ಹೊರಬಂದಿದೆ. ಟ್ರೇಲರ್ ಬಿಡುಗಡೆಗೂ ಒಂದು ದಿನ ಮುನ್ನ ‘ಭಜರಂಗಿ 2’ ಚಿತ್ರತಂಡ ಈ ಪೋಸ್ಟರ್ ಹಂಚಿಕೊಂಡಿದೆ. ಇದರಲ್ಲಿ ವಿಲನ್ ಆರಕ ಅಬ್ಬರಿಸಿದ್ದಾನೆ. ಅದನ್ನು ನೋಡಿದರೆ ಸಿನಿಪ್ರಿಯರ ಕೌತುಕ ಡಬಲ್ ಆಗುವುದರಲ್ಲಿ ಸಂಶಯವಿಲ್ಲ.
ಬೇರೆಲ್ಲ ಸಿನಿಮಾಗಳಲ್ಲಿ ಗೊಂಬೆಯಂತೆ ಕಾಣಿಸಿಕೊಳ್ಳುತ್ತಿದ್ದ ಭಾವನಾ ಮೆನನ್ ಈ ಚಿತ್ರದಲ್ಲಿ ರಗಡ್ ಅವತಾರ ತಾಳಿದ್ದಾರೆ. ‘ಚಿಣಿಮಿಣಿಕಿ- ದಿ ಲೇಡಿ ಫೈರ್’ ಎಂಬ ಅಡಿಬರಹದಲ್ಲಿ ನಾಯಕಿ ಭಾವನಾ ಮೆನನ್ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿತ್ತು. ಕೇವಲ ಪೋಸ್ಟರ್ಗಳೇ ಈ ಮಟ್ಟಕ್ಕೆ ಕ್ರೇಜ್ ಸೃಷ್ಟಿ ಮಾಡಿರುವಾಗ ಇನ್ನು ಟ್ರೇಲರ್ ಹೇಗಿರಬಹುದು? ಬುಧವಾರ (ಅ.20) ಸಂಜೆ 6.45ಕ್ಕೆ ಟ್ರೇಲರ್ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.
ಇದನ್ನೂ ಓದಿ :
Discussion about this post