ಭುವನೇಶ್ವರ: ಒಡಿಶಾದ 24 ವರ್ಷದ ಶಿಕ್ಷಕಿ ಮಮಿತಾ ಮೆಹೆರ್ ಅವರ ಪೂರ್ವನಿಯೋಜಿತ ಕೊಲೆಯು ಇಡೀ ರಾಜ್ಯವನ್ನು ಆಘಾತಕ್ಕೆ ದೂಡಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ ಗೋವಿಂದ್ ಸಾಹು ಎಂಬಾತನನ್ನು ಬಂಧಿಸಿದ ಬಳಿಕ ವಿಚಾರಣೆಯಲ್ಲಿ ಮತ್ತಷ್ಟು ಭಯಾನಕ ಸಂಗತಿಗಳು ಬೆಳಕಿಗೆ ಬಂದಿವೆ.
ಮಮಿತಾ ಅವರು ಒಡಿಶಾದ ಕಲಹಂಡಿ ಜಿಲ್ಲೆಯ ಮಹಾಲಿಂಗದಲ್ಲಿರುವ ಸನ್ಸೈನ್ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿಯಾಗಿದ್ದರು. ಇದ್ದಕ್ಕಿದ್ದಂತೆ ಅ.8ರಂದು ಮಮಿತಾ ನಾಪತ್ತೆಯಾಗಿದ್ದರು. ಇದರ ಹಿಂದೆ ಅದೇ ಶಾಲೆಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿದ್ದ ಗೋವಿಂದ್ ಸಾಹು ಕೈವಾಡ ಇದೆ ಎಂದು ಆರೋಪಿಸಿ ಕುಟುಂಬಸ್ಥರು ದೂರು ದಾಖಲಿಸಿದ್ದರು.
ಇದಾದ ಬಳಿಕ ಸಾಹುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಮಮಿತಾರನ್ನು ಕೊಂದು ಆಕೆಯ ಮೃತದೇಹವನ್ನು ಸಮಾಧಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅ.8ರಂದು ಸಾಹು ತನ್ನ ಕಾರಿನಲ್ಲಿ ಮಮಿತಾರನ್ನು ಭವಾನಿಪಟ್ಟಣಕ್ಕೆ ಕರೆದೊಯ್ದಿದ್ದಾನೆ. ಮರಳಿ ಬರುವಾಗ ಕಾರಿನ ಒಳಗಡೆಯೇ ಮಮಿತಾರನ್ನು ಸಾಹು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಮಮಿತಾ, ಸಾಕಷ್ಟು ಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ.
ಕೊಲೆಗೆ ಕಾರಣ ಏನೆಂದು ನೋಡಿದಾಗ, ಮಮಿತಾ ಬಳಿ ಸಾಹುಗೆ ಸಂಬಂಧಿಸಿದ ಎರಡು ಆಕ್ಷೇಪಾರ್ಹ ವಿಡಿಯೋಗಳಿದ್ದವು ಎಂದು ತಿಳಿದುಬಂದಿದೆ. ಆಕೆಯನ್ನು ಹೀಗೆ ಬಿಟ್ಟರೆ ಮುಂದೆ ಮತ್ತಷ್ಟು ಸಮಸ್ಯೆಯಾಗಬಹುದು ಅಂತಾ ದುರಾಲೋಚನೆಯಿಂದ ಆಕೆಯನ್ನು ಸಾಹು ಕೊಲೆಗೈದಿದ್ದಾನೆ. ಶಾಲೆಯಲ್ಲಿದ್ದ ಮಹಿಳಾ ಉದ್ಯೋಗಿಗಳ ಮೇಲೆ ಸಾಹು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದೆ. ಅಲ್ಲದೆ, ಆತನ ಅಕ್ರಮ ಸಂಬಂಧಗಳನ್ನು ಬಯಲಿಗೆಳೆದು ಮುಖವಾಡವನ್ನು ಕಳಚುವುದಾಗಿ ಮಮಿತಾ ಎಚ್ಚರಿಕೆ ನೀಡಿದ್ದಳೆಂದು ಹೇಳಲಾಗಿದೆ.
ಇದನ್ನೂ ಓದಿ :
ತೆನೆಯಿಳಿಸಿ ‘ಕೈ’ ಹಿಡಿಯೋ ಲೆಕ್ಕಾಚಾರದಲ್ಲಿರೋ ಗುಬ್ಬಿ ಜೆಡಿಎಸ್ ಶಾಸಕನಿಗೆ ಸಂಕಷ್ಟ
Discussion about this post