ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಗಾಗಿ ಟೀಮ್ ಇಂಡಿಯಾವನ್ನು (Team India) ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಭಾರತ ತಂಡದ ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಆಯ್ಕೆಯಾಗಿದ್ದಾರೆ. ಇನ್ನು ಉಪನಾಯಕನಾಗಿ ಕೆಎಲ್ ರಾಹುಲ್ (KL Rahul) ಕಾಣಿಸಿಕೊಳ್ಳಲಿದ್ದಾರೆ. 16 ಸದಸ್ಯರನ್ನು ಒಳಗೊಂಡಿರುವ ಈ ತಂಡದಲ್ಲಿ ಕೆಲ ಆಟಗಾರರು ಕಂಬ್ಯಾಕ್ ಮಾಡಿದರೆ, ಇನ್ನು ಕೆಲ ಆಟಗಾರರು ಚೊಚ್ಚಲ ಅವಕಾಶ ಪಡೆದಿದ್ದಾರೆ. ಇನ್ನು ವಿಶ್ರಾಂತಿಯ ಕಾರಣ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ. ಹಾಗೆಯೇ ಟಿ20 ವಿಶ್ವಕಪ್ ತಂಡದಲ್ಲಿದ್ದ ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ ಹಾಗೂ ರಾಹುಲ್ ಚಹರ್ ಅನ್ನು ತಂಡದಿಂದ ಕೈ ಬಿಡಲಾಗಿದೆ.
ಹಾಗೆಯೇ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮೂವರು ಆಟಗಾರರು ಈ ಬಾರಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಇದೇ ಮೊದಲ ಬಾರಿಗೆ ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್ ಹಾಗೂ ಅವೇಶ್ ಖಾನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಯುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದರು. 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಅಯ್ಯರ್ 370 ರನ್ ಬಾರಿಸುವ ಮೂಲಕ ಅಬ್ಬರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದ ಇದೀಗ ವೆಂಕಟೇಶ್ ಅಯ್ಯರ್ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ.
ಇನ್ನು ಆರ್ಸಿಬಿ ಪರ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದ ಹರ್ಷಲ್ ಪಟೇಲ್ 32 ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಐಪಿಎಲ್ನ ಪರ್ಪಲ್ ಕ್ಯಾಪ್ ವಿನ್ನರ್ಗೂ ತಂಡದಲ್ಲಿ ಚಾನ್ಸ್ ಲಭಿಸಿದೆ. ಮತ್ತೊಂದೆಡೆ ಈ ಬಾರಿಯ ಐಪಿಎಲ್ನಲ್ಲಿ 24 ವಿಕೆಟ್ ಪಡೆದು 2ನೇ ಯಶಸ್ವಿ ಬೌಲರ್ ಎನಿಸಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೂವರು ಆಟಗಾರರು ಇದೇ ಮೊದಲ ಬಾರಿಗೆ ಭಾರತೀಯ ತಂಡದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಟೀಮ್ ಇಂಡಿಯಾ ಹೀಗಿದೆ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
Discussion about this post