ದೆಹಲಿ: ಆರ್ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಗವರ್ನರ್ ಶಕ್ತಿಕಾಂತ್ ದಾಸ್ (RBI Governor Shaktikanta Das) ಅವರ ಅಧಿಕಾರ ಅವಧಿಯನ್ನು ಮತ್ತೆ ಮೂರು ವರ್ಷಗಳಿಗೆ ವಿಸ್ತರಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಶಕ್ತಿಕಾಂತ್ ದಾಸ್ ಅಧಿಕಾರ ಅವಧಿ 2021ರ ಡಿಸೆಂಬರ್ 10ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಈಗ ಕೇಂದ್ರ ಸರ್ಕಾರ ಅದನ್ನು ವಿಸ್ತರಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಮರುನೇಮಕಾತಿಗೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ.
ಶಕ್ತಿಕಾಂತ್ ದಾಸ್ 2018ರ ಡಿಸೆಂಬರ್ 11ರಂದು ಆರ್ಬಿಐ ಗವರ್ನರ್ ಆಗಿ ನೇಮಕಗೊಂಡಿದ್ದರು. ಅದಕ್ಕೂ ಮೊದಲು ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ಹಣಕಾಸು, ಟ್ಯಾಕ್ಸೇಶನ್, ಉದ್ಯಮ, ಮೂಲಸೌಕರ್ಯಗಳಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಬಹುಮುಖ್ಯ ಹುದ್ದೆಗಳನ್ನು ನಿಭಾಯಿಸಿದ ಅನುಭವ ಅವರಿಗೆ ಇದೆ. ಹಾಗೇ, ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB), ನ್ಯೂ ಡೆವಲಪ್ಮೆಂಟ್ ಬ್ಯಾಂಕ್ (NDB), ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AHB)ಗಳಲ್ಲಿ ಭಾರತದ ಪರ್ಯಾಯ ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಣಕಾಸು ಸಚಿವಾಲಯದಲ್ಲಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿರುವ ಶಕ್ತಿಕಾಂತ್ ದಾಸ್ ಒಟ್ಟು 8 ಕೇಂದ್ರ ಬಜೆಟ್ಗಳ ತಯಾರಿಕೆಯಲ್ಲಿ ನೇರವಾಗಿ ಕಾರ್ಯನಿರ್ವಹಿಸಿದ್ದಾರೆ.
Discussion about this post