ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ಕೆಲವು ಸುದ್ದಿಗಳು ಓಡಾಡುತ್ತಿವೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ. ಹಾಗೇ, ಖಾಸಗಿ ಕ್ರಿಪ್ಟೋಕರೆನ್ಸಿ (cryptocurrency) ಗಳನ್ನು ರದ್ದುಗೊಳಿಸಿ, ಸರ್ಕಾರದ ಕ್ರಿಪ್ಟೋಕರೆನ್ಸಿಗಳೇ ಚಾಲನೆಗೆ ಬರಲಿವೆ ಎಂಬ ವಿಚಾರ ಬಲ್ಲಮೂಲಗಳಿಂದ ತಿಳಿದುಬಂದಿದೆ. ಆದರೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಿರುವಾಗ ಇಂದು ಸಿಡ್ನಿ ಡೈಲಾಗ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಇದೇ ಮೊದಲ ಬಾರಿಗೆ ಕ್ರಿಪ್ಟೋಕರೆನ್ಸಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ‘ಆಧುನಿಕ ತಂತ್ರಜ್ಞಾನಗಳು ಸಂಘರ್ಷ ಮತ್ತು ವಿನಾಶವನ್ನುಂಟು ಮಾಡುವಷ್ಟು ಶಕ್ತಿಶಾಲಿಗಳು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅದಾಗಲು ಬಿಡಬಾರದು. ಇನ್ನು ಕ್ರಿಪ್ಟೋಕರೆನ್ಸಿ ತಪ್ಪಾದ ಜನರ ಕೈಗೆ ಸೇರದಂತೆ ತಡೆಯುವ ಜವಾಬ್ದಾರಿಯನ್ನು ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳೂ ಹೊರಬೇಕು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಈ ಕ್ರಿಪ್ಟೋಕರೆನ್ಸಿ ನಮ್ಮ ಯುವಜನರ ಭವಿಷ್ಯವನ್ನೇ ಹಾಳುಮಾಡುವಷ್ಟು ಸಾಮರ್ಥ್ಯ ಹೊಂದಿದೆ ಎಂದು ಈ ಡಿಜಿಟಲ್ ಕರೆನ್ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಇಂದು ಸಿಡ್ನಿ ಡೈಲಾಗ್ ಉದ್ದೇಶಿಸಿ, ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕ್ರಾಂತಿ ಎಂಬ ವಿಚಾರವಾಗಿ ಮಾತನಾಡಿದ ಅವರು, ಭಾರತದಲ್ಲ ದತ್ತಾಂಶ ರಕ್ಷಣೆ, ಖಾಸಗಿತನ ಮತ್ತು ಭದ್ರತೆಗಾಗಿ ದೃಢವಾದ ಚೌಕಟ್ಟು ರೂಪಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಹಕ್ಕಿಗೆ ತೊಡಕಾಗದಂತೆ, ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಡಾಟಾ ಬಳಕೆ ಮಾಡುತ್ತ ಜನರ ಸಬಲೀಕರಣಗೊಳಿಸಲಾಗುತ್ತಿದೆ ಎಂದು ಇಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಂದಹಾಗೆ ಈ ಸಿಡ್ನಿ ಡೈಲಾಗ್ನ್ನು ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ ಆಯೋಜಿಸಿತ್ತು. ಅದರಲ್ಲಿ ಮೋದಿಯವರು ವರ್ಚ್ಯುವಲ್ ಆಗಿ ಭಾಷಣ ಮಾಡಿದ್ದಾರೆ.
ಸದ್ಯಕ್ಕಂತೂ ದೇಶದಲ್ಲಿ ಕ್ರಿಪ್ಟೋಕರೆನ್ಸಿ ವ್ಯಾಪಕವಾಗಿ ಸುದ್ದಿಯಲ್ಲಿದೆ. ಡಿಜಿಟಲ್ ಕರೆನ್ಸಿ ಬೆಳವಣಿಗೆಯೆಂಬುದು ದೇಶದ ಭದ್ರತೆಗೆ ಆತಂಕವೊಡ್ಡುವ ಸಾಧ್ಯತೆಯಿದೆ ಎಂಬ ಕಳವಳವೂ ಹೆಚ್ಚುತ್ತಿದೆ. ಅದರಲ್ಲೂ ಈ ಕ್ರಿಪ್ಟೋಕರೆನ್ಸಿಗಳು ಉಗ್ರರಿಗೆ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವ ಪ್ರಮುಖ ಮಾರ್ಗವಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಇನ್ನು ಈ ಬಗ್ಗೆ ಪಾರ್ಲಿಮೆಂಟ್ನ ಚಳಿಗಾಲದ ಅಧಿವೇಶನದಲ್ಲಿ ವ್ಯಾಪಕ ಚರ್ಚೆಯಾಗಲಿದ್ದು, ನಿಯಂತ್ರಣ ಸಂಬಂಧ ಮಸೂದೆ ಮಂಡನೆಯಾಗಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ.
Discussion about this post