ನವದೆಹಲಿ: ಭಾರತದಲ್ಲಿ ಒಟ್ಟು 415 ಒಮಿಕ್ರಾನ್ ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ. ಅದರಲ್ಲಿ 115 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಮಹಾರಾಷ್ಟ್ರದಲ್ಲಿ ಅಂದರೆ 108 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ದೆಹಲಿ 79, ಗುಜರಾತ್ 43, ತೆಲಂಗಾಣ 38, ಕೇರಳ 37, ತಮಿಳುನಾಡು 34 ಒಮಿಕ್ರಾನ್ ಪ್ರಕರಣಗಳು ವರದಿಯಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಯಾವುದೇ ರೀತಿಯ ಒಮಿಕ್ರಾನ್ ಪ್ರಕರಣಗಳು ವರದಿಯಾಗಿಲ್ಲ. ಕೇಂದ್ರವು ಶುಕ್ರವಾರ 358 ಒಮಿಕ್ರಾನ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿತ್ತು. 183 ಒಮಿಕ್ರಾನ್ ಸೋಂಕಿತರಲ್ಲಿ 87 ಮಂದಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿದ್ದಾರೆ. ಇದರಲ್ಲಿ ಮೂರು ಮಂದಿ ಸೋಂಕಿತರು ಬೂಸ್ಟರ್ ಡೋಸ್ ಪಡೆದಿದ್ದಾರೆ. ಶೇ.70ರಷ್ಟು ಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.
ಒಮಿಕ್ರಾನ್ ವೈರಾಣು ಏರಿಕೆಯ ಕಾರಣ ಮಹಾರಾಷ್ಟ್ರ ಸರ್ಕಾರ ಕ್ರಿಸ್ಮಸ್ ಆಚರಣೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಯಾವುದೇ ರೀತಿಯ ಸಭೆಗಳನ್ನು ಮಾಡುವಂತಿಲ್ಲ. ಹಾಗೆಯೇ ಹರಿಯಾಣ ಮತ್ತು ದೆಹಲಿಯಲ್ಲೂ ಕ್ರಿಸ್ಮಸ್ ಆಚರಣೆಯ ನಿರ್ಬಂಧಗಳನ್ನು ವಿಧಿಸಲಾಗಿದೆ.
ಕಳೆದ 24 ಗಂಟೆಯಲ್ಲಿ 7,189 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತನ ಒಟ್ಟು ಪ್ರಕರಣಗಳು 3,47,79,815ಕ್ಕೇರಿದ್ದು, 77,032 ಸಕ್ರಿಯ ಪ್ರಕರಣಗಳಿದೆ.
Discussion about this post