ಇದು ಪ್ರಧಾನಿ ನರೇಂದ್ರ ಮೋದಿಯ ದೃಢಸಂಕಲ್ಪ.. ದೇಶದ ಪುಣ್ಯ ಕ್ಷೇತ್ರ ಕಾಶಿ ವಿಶ್ವನಾಥನ ಮಂದಿರಕ್ಕೆ ಕಾಯಕಲ್ಪ ನೀಡಬೇಕೆಂಬ ಅಚಲ ಗುರಿ. ಕೊನೆಗೂ ನಮೋ ಕನಸು ನನಸಾಗಿದೆ. ಕಾಶಿ ವಿಶ್ವನಾಥನ ಗತವೈಭವ ಮರುಕಳಿಸಲಿದೆ. ವಾರಣಸಿಯ ಪವಿತ್ರ ಸ್ಥಳದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಅತೀದೊಡ್ಡ ದೇವಕಾರ್ಯಕ್ಕೆ ಸಕಲ ಸಿದ್ಧತೆಯಾಗಿದೆ.
ಆದ್ರೆ, ಕಾಶಿ ವಿಶ್ವನಾಥನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾಡಿದ್ದು ಕಡಿಮೆ ಸಾಧನೆ ಅಲ್ಲ. ಅಲ್ಲಿದ್ದ ಸವಾಲುಗಳು ಒಂದೆರಡಲ್ಲ.
‘ಇಲ್ಲಿಗೆ ನಾನಾಗೇ ಬಂದಿಲ್ಲ ಗಂಗಾ ಮಾತೆ ನನ್ನನ್ನಿಲ್ಲಿಗೆ ಕರೆದಿದ್ದಾಳೆ. ಕಾಶಿ ಜಗತ್ತಿನ ಅತ್ಯುನ್ನತ ಆಧ್ಯಾತ್ಮಿ ಸ್ಥಳವನ್ನಾಗಿ ಮಾಡೋದು ನನ್ನ ಉದ್ದೇಶ ಅಂತಾ ಮಾತುಕೊಟ್ಟಿದ್ರು’ ಪ್ರಧಾನಿ ನರೇಂದ್ರ ಮೋದಿ. 7 ವರ್ಷಗಳ ಹಿಂದೆ ಕೊಟ್ಟಿದ್ದ ಮಾತು ಇಂದು ಕಾರ್ಯರೂಪಕ್ಕೆ ಬಂದಿದೆ. ಕೋಟ್ಯಂತರ ಹಿಂದೂಗಳ ಶ್ರದ್ಧಾ ಕೇಂದ್ರ ಕಾಶಿ ವಿಶ್ವನಾಥನ ಸನ್ನಿಧಿ ಇಂದು ಭವ್ಯವಾಗಿ ತಲೆ ಎತ್ತಿ ನಿಂತಿದೆ. ಗಂಗಾ ತಟದಲ್ಲಿರೋ ವಿಶ್ವನಾಥನ ಸನ್ನಿಧಾನದ ಗತ ವೈಭವ ಮರುಕಳಿಸಿದೆ.
ಇಂದು ಗಂಗಾ ತಟದಲ್ಲಿ ‘ದಿವ್ಯ-ಕಾಶಿ ಭವ್ಯ-ಕಾಶಿ’ ದರ್ಶನ
ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಕಾಶಿಯನ್ನು ಹೇಗೆ ನೋಡಬೇಕು ಅಂದುಕೊಂಡಿದ್ದರೋ ಇವತ್ತು ಅದು ಆಗಿದೆ. ಮೊದಲಿದ್ದ ಕಾಶಿ ಸಂಪೂರ್ಣವಾಗಿ ಚೇಂಜ್ ಆಗಿದೆ. ಭಕ್ತರು ಓಡಾಡಲೂ ಜಾಗವಿಲ್ಲದೆ, ಶಿವನ ದರ್ಶನಕ್ಕೂ ಕಷ್ಟಪಡೋ ಪರಿಸ್ಥಿತಿ ಇಂದು ಬದಲಾಗಿದೆ. ಯಾಕಂದ್ರೆ ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಇಡೀ ಕಾಶಿ ನಗರವನ್ನೇ ಸಿಂಗರಿಸಲಾಗಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ.
‘ನಮೋ’ ವಿಶ್ವನಾಥನ ಕನಸು!
ಕಾಶಿ ವಿಶ್ವನಾಥನ ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ 2019 ರಲ್ಲಿಯೇ ಭೂಮಿ ಪೂಜೆ ನೆರವೇರಿಸಿದ್ರು. ವಿಶೇಷ ಅಂದ್ರೆ ವಿಶ್ವನಾಥನ ಮೂಲ ಮಂದಿರಕ್ಕೆ ಧಕ್ಕೆ ಆಗದಂತೆ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಮಂದಿರದ ಪಕ್ಕದಲ್ಲಿಯೇ ಆಸ್ಪತ್ರೆ, ವಿಶ್ರಾಂತಿ ಗೃಹ ನಿರ್ಮಿಸಲಾಗಿದೆ. ಮಾಹಿತಿ ಕೇಂದ್ರ, ವೇದ ಕೇಂದ್ರ, ಧಾರ್ಮಿಕ ಪುಸ್ತಕ ಕೇಂದ್ರಗಳ ಕಟ್ಟದ ನಿರ್ಮಾಣಗಳ ಕಾರ್ಯವೂ ಪೂರ್ಣಗೊಂಡಿದೆ. ಬರೋಬ್ಬರಿ 5 ಸಾವಿರ ಹೆಕ್ಟೇರ್ನಲ್ಲಿ, ಪ್ರಾಜೆಕ್ಟ್ ಮುಗಿದಿದೆ. ಇದರಿಂದ ಗಂಗಾನದಿ ಘಾಟ್‌ನಿಂದ ಮಂದಿರಕ್ಕೆ ತಡೆರಹಿತ ಮುಕ್ತ ಪ್ರವೇಶಕ್ಕೆ ಅವಕಾಶ ಸಿಗಲಿದೆ. ವಿಶ್ವನಾಥ ಮಂದಿರದ ನಾಲ್ಕು ದ್ವಾರದಲ್ಲಿ ಜನಸಂಚಾರದ ಇಕ್ಕಟ್ಟಿಗೆ ಮುಕ್ತಿ ಸಿಗಲಿದೆ. ದೇವಾಲಯದ ಸಂಕೀರ್ಣಕ್ಕೆ ಹೊಸ ರೀತಿಯ ಕಾಯಕಲ್ಪ ನೀಡಲಾಗಿದ್ದು, ಯೋಜನೆಗೆ ಬರೋಬ್ಬರಿ, 800 ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗಿದೆ. ಇದರಿಂದ ವಿಶ್ವನಾಥನ ದರ್ಶನಕ್ಕೆ ಇದ್ದ ಸಮಸ್ಯೆಗೆ ಸಂಪೂರ್ಣ ಮುಕ್ತಿ ಸಿಕ್ಕಿದಂತಾಗಿದೆ.
51,000 ಸ್ಥಳಗಳಲ್ಲಿ ‘ದಿವ್ಯ-ಕಾಶಿ, ಭವ್ಯ ಕಾಶಿ’ ಲೋಕಾರ್ಪಣೆ ಲೈವ್
ಈ ಭವ್ಯ ಸಮಾರಂಭದಲ್ಲಿ ಬರೋಬ್ಬರಿ 3 ಸಾವಿರ ಸಾಧು ಸಂತರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಿಂದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸುತ್ತೂರು, ಆದಿಚುಂಚನಗಿರಿ, ಹರಿಹರ ಪಂಚಮಸಾಲಿ ಪೀಠ, ಹುಬ್ಬಳ್ಳಿಯ ಮೂರು ಸಾವಿರ ಮಠ, ಕೊಪ್ಪಳದ ಗವಿ ಮಠ, ಶಿರಸಿಯ ಸ್ವರ್ಣವಲ್ಲಿ ಮಠ, ಚಿತ್ರದುರ್ಗದ ಭೋವಿಪೀಠದ ಮಠಾಧೀಶರಿಗೂ ಆಹ್ವಾನ ನೀಡಲಾಗಿದೆ. ಜೊತೆಗೆ ಬೇರೆ ಬೇರೆ ಧರ್ಮದ ಧರ್ಮಗುರುಗಳೂ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ‘ದಿವ್ಯ ಕಾಶಿ, ಭವ್ಯ ಕಾಶಿ’ ಎಂಬ ಹೆಸರಿನಲ್ಲಿ ಇಡೀ ಕಾರ್ಯಕ್ರಮವನ್ನು 51 ಸಾವಿರ ಸ್ಥಳದಲ್ಲಿ ಎಲ್‌ಇಡಿ ಸ್ಕ್ರೀನ್ ಹಾಕಿ ನೇರ ಪ್ರಸಾರ ಮಾಡಲಾಗುತ್ತಿದೆ.
Discussion about this post