ನವದೆಹಲಿ: ತಾಯ್ನಾಡಿನ ವಿಚಾರದಲ್ಲಿ ಧಕ್ಕೆ ಉಂಟಾದರೂ ಸಂಸತ್ ಕಲಾಪದಲ್ಲಿ ಯಾವೊಬ್ಬ ಸಂಸದರೂ ಧ್ವನಿ ಎತ್ತದಿರೋದು ಕನ್ನಡಿಗರನ್ನ ಕೆರಳಿಸುವಂತೆ ಮಾಡಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟವನ್ನ ಸುಡಲಾಗಿದೆ, ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಲಾಗ್ತಿದೆ. ಇತ್ತ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನ ವಿರೂಪಗೊಳಿಸಿದ್ದಾರೆ.
ಹೀಗಿದ್ದೂ ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಸೈಲೆಂಟ್ ಆಗಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿದ್ದರೂ ಯಾವೊಬ್ಬ ನಾಯಕರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಘಟನೆ ನಡೆದು ನಾಲ್ಕು ದಿನ ಕಳೆದರೂ ಸಂಸದರು ಮಾತ್ರ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಬಿಜೆಪಿಯಿಂದ 25 ಸಂಸದರು, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರಾಗಿ ತಲಾ ಒಬ್ಬ ಸದಸ್ಯರು ಸಂಸತ್ನಲ್ಲಿದ್ದಾರೆ.
ದೂರು ನೀಡಿದ ಶಿವಸೇನೆ
ಇನ್ನು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಕರ್ನಾಟಕದವರೇ ಆಗಿರುವ ಮಲ್ಲಿಕಾರ್ಜುನ್ ಖರ್ಗೆ ಇದ್ದಾರೆ. ಆದರೂ ಈ ಬಗ್ಗೆ ಯಾವೊಬ್ಬ ಸಂಸದರು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ತುಟಿ ಬಿಚ್ಚಿಲ್ಲ. ಆದರೆ ಶಿವಸೇನೆಯ ಸಂಸದರು ಮಾತ್ರ ಶಿವಾಜಿ ಪುತ್ಥಳಿಗೆ ಮಸಿ ಬಳದಿರುವ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಕರ್ನಾಟಕದ ಸಂಸದರು ತಾಯ್ನಾಡಿನ ವಿಚಾರಕ್ಕೆ ಧಕ್ಕೆ ಬಂದರೂ ಮೌನವಾಗಿದ್ದಾರೆ.
Discussion about this post