ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಗುರುವಾರ ಮಿನಿ ಬಸ್ಸೊಂದು ರಸ್ತೆಯಿಂದ ಜಾರಿ ಕಂದಕ್ಕೆ ಉರುಳಿದ ಪರಿಣಾಮ ಒಂಬತ್ತು ಪ್ರಯಾಣಿಕರು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೋಡಾದಿಂದ ಥಾತ್ರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಸುಯಿ ಗೌರಿ ಎಂಬಲ್ಲಿ ಅಪಘಾತಕ್ಕೀಡಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸ್ ಕಂದಕಕ್ಕೆ ಬಿದ್ದ ನಂತರ ಎರಡು ತುಂಡಾಯಿತು. ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು.
ಗಂಭೀರವಾಗಿ ಗಾಯಗೊಂಡಿದ್ದ ಏಳು ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಜಮ್ಮುವಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದವರನ್ನು ದೋಡಾದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಪ್ರಧಾನಿ ಶೋಕ-2 ಲಕ್ಷ ಪರಿಹಾರ: ಅಪಘಾತದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬದವರಿಗೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.
Discussion about this post