ಯಾದಗಿರಿ: ಕೆಸ್ಆರ್ಟಿಸಿ ಬಸ್‌ನಲ್ಲಿ ಕುರಿಗಳು ಸಹ ಟಿಕೆಟ್ ಪಡೆದು ಪ್ರಯಾಣ ಬೆಳೆಸಿರುವ ಅಪರೂಪದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಕುರಿಗಳ ಮಾಲೀಕ ಕುರಿಗಳನ್ನು(Sheep) ಬಸ್‌ನಲ್ಲಿ ತೆಗೆದುಕೊಂಡು ಹೋಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಸಾಮಾನ್ಯ. ಆದರೆ ಕುರಿಗಳಿಗೂ ಸಹ ಬಸ್ ಕಂಡಕ್ಟರ್ ಫುಲ್ ಟಿಕೆಟ್(Bus ticket) ನೀಡಿರುವುದು ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ರೈತರಾದ ಸುನೀಲ್ ಹಾಗೂ ರಾಮಲಿಂಗಪ್ಪ ತಮ್ಮ ಜೊತೆ ಕುರಿಗಳಿಗೂ ಬಸ್‌ನಲ್ಲಿ ಪ್ರಯಾಣ ಮಾಡಿಸಿದ್ದಾರೆ. ಯಾದಗಿರಿ ನಗರದಲ್ಲಿ ಪ್ರತಿ ಮಂಗಳವಾರದಂತೆ ನಿನ್ನೆ (ನವೆಂಬರ್ 16) ಕೂಡ ಕುರಿಗಳ ಸಂತೆ ಏರ್ಪಟ್ಟಿತ್ತು. ಈ ಕುರಿ ಸಂತೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದಿದೆ. ಇನ್ನು ಸಂತೆಗೆ ಆಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಯಿಂದ ರೈತರು ಹಾಗೂ ವ್ಯಾಪಾರಸ್ಥರು ಕುರಿಗಳನ್ನು ಖರೀದಿ ಹಾಗೂ ಮಾರಾಟ ಮಾಡಲು ಬರುತ್ತಾರೆ. ಅದರಂತೆ ರೈತರಾದ ಸುನಿಲ್ ಮತ್ತು ರಾಮಲಿಂಗಪ್ಪ ಆಗಮಿಸಿದ್ದಾರೆ.
ರೈತರಾದ ಸುನೀಲ್ ಮತ್ತು ರಾಮಲಿಂಗಪ್ಪ ನಿನ್ನೇ ಸಂತೆಗೆ ಬಂದು ಎರಡು ಕುರಿಗಳನ್ನು ಖರೀದಿ ಮಾಡಿದ್ದಾರೆ. ಇನ್ನು ಊರಿಗೆ ಹೋಗಲು ತಮಗೆ ಬಸ್ ವ್ಯವಸ್ಥೆ ಇದೆ. ಆದರೆ ಕುರಿಗಳನ್ನು ಹೇಗೆ ತೆಗೆದುಕೊಂಡು ಹೋಗಬೇಕು ಅಂದುಕೊಂಡಾಗ ಇಬ್ಬರು ಸೇರಿ ತಮ್ಮ ಜೊತೆಗೆ ಕುರಿಗಳನ್ನು ಕೆಸ್ಆರ್ಟಿಸಿ ಬಸ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಕಂಡಕ್ಟರ್ ಸಹ ಕುರಿಗಳನ್ನು ಲಗೇಜ್ ರೀತಿಯಲ್ಲಿ ಪರಿಗಣಿಸಿ ಟಿಕೆಟ್ ನೀಡಿದ್ದಾರೆ.
Discussion about this post