ನವದೆಹಲಿ: ರಾಜಸ್ಥಾನದ ಗೋಗುಂಡಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಶಾಸಕ ಪ್ರತಾಪ್ ಭೀಲ್ ವಿರುದ್ಧ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಅತ್ಯಾಚಾರ ಎಸಗಿರುವುದಾಗಿ ಎರಡು ಪ್ರಕರಣಗಳು ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇಬ್ಬರು ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ಹಾಗೂ ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಹೊಸ ಪ್ರಕರಣದಲ್ಲಿ, ಮಹಿಳೆ ಅಂಬಾಮಾತಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ, ಬಿಜೆಪಿ ಶಾಸಕ ಪ್ರತಾಪ್ ಭೀಲ್ ತನಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾರೆ. ನಂತರ ತನ್ನ ಮದುವೆಯಾಗುವುದಾಗಿ ನಂಬಿಸಿ ಹಲವಾರು ಬಾರಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಮತ್ತೊಂದು ಪ್ರಕರಣ ಶಾಸಕ ಪ್ರತಾಪ್ ಭೀಲ್ ವಿರುದ್ಧ ಹತ್ತು ತಿಂಗಳ ಹಿಂದೆ ಸುಖೇರ್ ನಲ್ಲಿ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ. ಈ ಪ್ರಕರಣದಲ್ಲಿಯೂ ಶಾಸಕ ಪ್ರತಾಪ್, ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ಮನೆಗೆ ಆಗಮಿಸಿದ್ದ ಶಾಸಕ ಮದುವೆಯಾಗುವುದಾಗಿ ಭರವಸೆ ನೀಡಿ, ಅತ್ಯಾಚಾರ ಎಸಗಿರುವುದಾಗಿ ಮಹಿಳೆ ತಿಳಿಸಿದ್ದು, ಈ ಆರೋಪವನ್ನು ಶಾಸಕ ಪ್ರತಾಪ್ ಭೀಲ್ ಅಲ್ಲಗಳೆದಿದ್ದಾರೆ ಎಂದು ವರದಿ ತಿಳಿಸಿದೆ.
Discussion about this post