ಶಿವಮೊಗ್ಗ: ಆ ‘ತ್ರಿಮೂರ್ತಿ’ಗಳು ಇರದೇ ಹೋಗಿದ್ದರೆ ಬಹುಶಃ ಈ ಮಹಿಳೆ ಬದುಕುಳಿಯುವ ಸಾಧ್ಯತೆಯೇ ಇರುತ್ತಿರಲಿಲ್ವೇನೋ!?ಚಲಿಸುತ್ತಿದ್ದ ರೈಲಿನಿಂದ ಬಿದ್ದು ಇನ್ನೇನು ಅಡಿಗೆ ಸಿಲುಕಿಯೇ ಬಿಟ್ರೇನೋ ಎಂಬಷ್ಟರಲ್ಲಿ ಆಕೆಯನ್ನು ರಕ್ಷಿಸಿದ ಆ ಮೂವರು ರೈಲ್ವೆ ಪೊಲೀಸರು ಅವರ ಪಾಲಿಗೆ ಬ್ರಹ್ಮ, ವಿಷ್ಣು, ಮಹೇಶ್ವರರಂತೆ ಧಾವಿಸಿದ್ದರು ಎಂದರೂ ಅತಿಶಯೋಕ್ತಿಯೇನಲ್ಲ.
ಆ ಮೂವರ ಪೈಕಿ ಒಬ್ಬರೇ ಒಬ್ಬರ ಪ್ರಯತ್ನ ಮಿಸ್ ಆಗಿದ್ದರೂ ಈ ಮಹಿಳೆ ಪ್ರಾಣ ಇಲ್ಲವೇ ಕೈಕಾಲು ಕಳೆದುಕೊಳ್ಳುವಂಥ ದುರಂತ ಸಂಭವಿಸಿರುತ್ತಿತ್ತು. ಶಿವಮೊಗ್ಗ ತಾಳಗುಪ್ಪ ಎಕ್ಸ್ಪ್ರೆಸ್ 06530 ರೈಲಿನಲ್ಲಿ ಸಂಬಂಧಿಕರನ್ನು ನೋಡಲು ಬಂದಿದ್ದ 50 ವರ್ಷದ ಮಹಿಳೆಯೇ ಪ್ರಾಣಾಪಾಯಕ್ಕೆ ಸಿಲುಕಿ ಬದುಕುಳಿದ ಈ ಅದೃಷ್ಟವಂತೆ
ರೈಲು ಬರುವ ಸಂದರ್ಭದಲ್ಲಿ ಶಿವಮೊಗ್ಗ ರೈಲ್ವೆ ಸ್ಟೇಷನ್ನಲ್ಲಿ ಆರ್ಪಿಎಫ್ ಜಗದೀಶ್ ಹಾಗೂ ಜಿಆರ್ಪಿ ಸಿಬ್ಬಂದಿ ಅಣ್ಣಪ್ಪ ಮತ್ತು ಸಂತೋಷ್ ಗಸ್ತಿನಲ್ಲಿದ್ದರು. ರೈಲು ಪೂರ್ತಿ ನಿಲ್ಲುವ ಮೊದಲೇ 50 ವರ್ಷದ ಮಹಿಳೆಯೊಬ್ಬರು ಇಳಿಯಲು ಮುಂದಾಗಿದ್ದು, ರೈಲು ಚಲಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಆಕೆಯನ್ನು ಇಳಿಸಿದ್ದರು.
ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮಹಿಳೆ ಆಯತಪ್ಪಿದ್ದು, ತಕ್ಷಣ ಅದನ್ನು ನೋಡಿದ ಜಗದೀಶ್ ಹಿಡಿಯಲು ಯತ್ನಿಸಿದರೂ ಪೂರ್ತಿಯಾಗಿ ಹಿಡಿತ ಸಿಗದೆ ಮಹಿಳೆ ಪ್ಲ್ಯಾಟ್ಪಾರ್ಮ್ ಅಂಚಿನಲ್ಲೇ ರೈಲಿಗೆ ತಾಗಿಗೊಂಡಂತೆ ಬಿದ್ದರು. ಅದೇ ಸಮಯಕ್ಕೆ ಅಣ್ಣಪ್ಪ ಮತ್ತು ಸಂತೋಷ್ ಕೂಡ ರಕ್ಷಣೆಗೆ ಧಾವಿಸಿದರೂ ಒಬ್ಬರ ಹಿಡಿತ ತಪ್ಪಿತು, ಮತ್ತೊಬ್ಬರು ಹಿಡಿದು ಬಚಾವ್ ಮಾಡಿದರು. ಒಟ್ಟಿನಲ್ಲಿ ಮೂವರಲ್ಲಿ ಯಾರಾದರೂ ಒಬ್ಬರ ಪ್ರಯತ್ನ ಇರದಿದ್ದರೂ ಆ ಮಹಿಳೆ ಪ್ರಾಣಾಪಾಯಕ್ಕೆ ಸಿಲುಕಿಬಿಟ್ಟಿರುತ್ತಿದ್ದರು. ಈ ದೃಶ್ಯ ರೈಲ್ವೆ ಸ್ಟೇಷನ್ನಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Discussion about this post