ಮೈಸೂರು: ತಾಯಿ ತಾನು ಹೆತ್ತ ಕರುಳ ಬಳ್ಳಿಯನ್ನೇ ಚಿವುಟಿ ಹಾಕಿ, ಮಗುವಿನ ಜೊತೆಗೆ ಬಾರದ ಲೋಕಕ್ಕೆ ಪಯಣಿಸಿದ ಹೃದಯವಿದ್ರಾವಕ ಘಟನೆಗೆ ಸಾಂಸ್ಕೃತಿಕ ನಗರಿ ಅಕ್ಷರಶಃ ಬೆಚ್ಚಿಬಿದ್ದಿದೆ.
ಹೆತ್ತ ಮಗುವನ್ನು ಕೊಲೆ ಮಾಡಿದ ತಾಯಿ ತಾನು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ (22), 2 ವರ್ಷದ ಮಗುವನ್ನು ಸಾಯಿಸಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದ ಮೃತ ಮಹಿಳೆ 2 ವರ್ಷಗಳ ಹಿಂದೆ ಕೃಷಿಕನಾಗಿದ್ದ ಮಹದೇವ ಪ್ರಸಾದ್ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿ ದಾಂಪತ್ಯ ಜೀವನಕ್ಕೆ ಮುದ್ದಾದ ಮೋಕ್ಷಿತ್ ಎಂಬ ಗಂಡು ಮಗು ಸಾಕ್ಷಿಯಾಗಿತ್ತು. ಆದರೆ ಅದೇನಾಗಿತ್ತೋ ಏನೋ ಈ ತಾಯಿ ಜಗತ್ತನ್ನು ಕಾಣಬೇಕಿದ್ದ ಪುಟ್ಟ ಕಂದನನ್ನು ನೀರು ತುಂಬಿದ್ದ ಬಕೆಟ್ನಲ್ಲಿ ಮುಳುಗಿಸಿ ಕೊಲೆಗೈದಿದ್ದಾಳೆ. ತಾಯಿಯ ಈ ಕಠೋರ ನಿರ್ಧಾರದಿಂದ ಮಗು ಬಾರದ ಲೋಕಕ್ಕೆ ಪಯಣ ಬೆಳೆಸಿದೆ.
ಮಗುವನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಬಳಿಕ ತಾನೂ ಕೂಡ ನೇಣು ಬಿಗಿದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ದುರ್ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗ್ತಿದ್ದು, ನಿಖರ ಕಾರಣ ಇದುವರೆಗೂ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಗೋವಿಂದ ರಾಜು, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ, ಪಿಎಸ್‌ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮನಕಲಕುವ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
Discussion about this post