ಸುಮಾರು 7 ಕೋಟಿ ರೂಪಾಯಿ ಮೌಲ್ಯದ 9 ಸಾವಿರ ಮೊಬೈಲ್ ಫೋನ್ಗಳನ್ನು ಒಯ್ಯುತ್ತಿದ್ದ ಬೆಂಗಳೂರು ಮೂಲದ ಟ್ರಕ್ನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ. ಈ ಬೆಂಗಳೂರಿನ ಟ್ರಕ್ನ್ನು ಮಧ್ಯಪ್ರದೇಶದ ಶಿಯೋಪುರ್ ಎಂಬಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿ, ಆತನನ್ನು ವಾಹನದಿಂದ ಎತ್ತಿ ಬಿಸಾಕಿದ್ದಾರೆ. ಬಳಿಕ ಲಾರಿಯನ್ನು ಲೂಟಿ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದರೂ ಉತ್ತರಪ್ರದೇಶದ ಮಥುರಾದಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಪ್ರಕರಣದ ಬಗ್ಗೆ ಮಥುರಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಟಂಡ್ ಪ್ರಕಾಶ್ ಸಿಂಗ್ ವಿವರಿಸಿದ್ದಾರೆ. ಲಾರಿ ಲೂಟಿಯಾಗಿರುವ ಬಗ್ಗೆ ಒಪ್ಪೊ ಮೊಬೈಲ್ (Oppo Mobile) ಕಂಪನಿಯ ಮ್ಯಾನೇಜರ್ ಸಚಿನ್ ಮಾನವ್ ಎಂಬುವರು ದೂರು ನೀಡಿದ್ದಾರೆ. ಲಾರಿ ಚಾಲಕ ಮನೀಶ್ ಯಾದವ್ ಉತ್ತರಪ್ರದೇಶದ ಫಾರೂಖಾಬಾದ್ ಜಿಲ್ಲೆಯವನು. ಅಕ್ಟೋಬರ್ 5ರಂದು ಮುಂಜಾನೆ ಬೆಂಗಳೂರಿನಿಂದ ಸುಮಾರು 9 ಸಾವಿರ ಮೊಬೈಲ್ ಫೋನ್ಗಳನ್ನು ಟ್ರಕ್ನಲ್ಲಿ ತುಂಬಿಕೊಂಡು ನೊಯ್ಡಾಕ್ಕೆ ಹೊರಟಿದ್ದ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿರುವ ಬೈಪಾಸ್ ಬಳಿ ಈತನ ಲಾರಿಗೆ ಇಬ್ಬರು ಪ್ರಯಾಣಿಕರು ಹತ್ತಿದ್ದರು. ಲಾರಿ ಝಾನ್ಸಿಯ ಬಬಿನಾ ಟೋಲ್ ದಾಟುತ್ತಿದ್ದಂತೆ ಈ ಪ್ರಯಾಣಿಕರ ಸೋಗಿನಲ್ಲಿ ಲಾರಿ ಹತ್ತಿದ್ದ ಇಬ್ಬರು ಚಾಲಕನಿಗೆ ಥಳಿಸಲು ಶುರು ಮಾಡಿದರು. ನಂತರ ಆತನನ್ನು ಲಾರಿಯಿಂದ ಎತ್ತಿ ಬಿಸಾಕಿದ್ದಾರೆ. ಟ್ರಕ್ನೊಂದಿಗೆ ಪರಾರಿಯಾಗಿದ್ದಾರೆ. ಅಂದಹಾಗೆ ಈ ಟ್ರಕ್ ಶಿಯೋಪುರ್ನ ಮನ್ಪುರ್ನಲ್ಲಿ ಸಿಕ್ಕಿದ್ದು, ಖಾಲಿಯಾಗಿತ್ತು. ಅದರಲ್ಲಿರುವ ಮೊಬೈಲ್ಗಳು ಯಾವುದೂ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಒಪ್ಪೋ ಕಂಪನಿ ಮ್ಯಾನೇಜರ್ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪ್ರಯತ್ನಿಸಿದರು. ಆದರೆ ಘಟನೆ ನಡೆದದ್ದು ಮಥುರಾ ಗಡಿಯ ಬಳಿ ಆಗಿದ್ದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಅವರು ಹೋಗಿ ಮಥುರಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ತನಿಖೆ ನಡೆಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ.
ಇದನ್ನೂ ಓದಿ :
Discussion about this post