ಸೂರತ್ (ಗುಜರಾತ್): ಮೃತಪಟ್ಟಮೇಲೆ ಮಣ್ಣಲ್ಲಿ ಮಣ್ಣಾಗಿ ಅಥವಾ ಚಿತೆಯಲ್ಲಿ ಉರಿದು ಹೋಗುವ ಮೊದಲು ಕೆಲವರ ಬಾಳಿಗೆ ಜೀವ ತುಂಬಿ ಹೋಗುವುದಕ್ಕಿಂತ ಮತ್ತೊಂದು ಮಹಾಕಾರ್ಯ ಇನ್ನಿಲ್ಲ. ಅದೇ ರೀತಿ ಕೆಲವರು ಅಂಗಾಂಗ ದಾನ, ನೇತ್ರ ದಾನಕ್ಕೆ ಮುಂದಾಗುತ್ತಿರುವ ನಡುವೆಯೇ, ಇಲ್ಲೊಬ್ಬ ಬಾಲಕ ಆರು ಮಂದಿಗೆ ಉಸಿರುವ ತುಂಬಿರುವ ಅಪರೂಪದ ಘಟನೆ ನಡೆದಿದೆ.
ಗುಜರಾತ್‌ನ ಸೂರತ್‌ನ 14 ವರ್ಷದ ಬಾಲಕ ಮೆದುಳು ಸಮಸ್ಯೆಯಿಂದಾಗಿ ಮೃತಪಟ್ಟಿದ್ದು, ಆತನ ಅಂಗಾಂಗಗಳು ಆರು ಮಂದಿಯ ಬಾಳಲ್ಲಿ ಜೀವ ತುಂಬಿದೆ. ಈತನ ಹೃದಯ, ಶ್ವಾಸಕೋಶ ಮಾತ್ರವಲ್ಲದೇ ಕೈಗಳನ್ನು ಕೂಡ ಬೇರೆಯವರಿಗೆ ದಾನ ಮಾಡಲಾಗಿದೆ. ಇವುಗಳನ್ನು ಅಗತ್ಯ ಇರುವವರಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ.
ಧಾರ್ಮಿಕ್ ಕಾಕಾಡಿಯ ಎನ್ನುವ ಬಾಲಕನ ಮೆದುಳಿನಲ್ಲಿ ರಕ್ತನಾಳಗಳು ಛಿದ್ರಗೊಂಡಿದ್ದವು. ಆದ್ದರಿಂದ ಆತನನ್ನು ಅಕ್ಟೋಬರ್ 27ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ವೈದ್ಯರು ಬಾಲಕ ಉಳಿಯುವುದು ಅಸಾಧ್ಯವೆಂದು ತಿಳಿಸಿದರು. ಇರುವ ಒಬ್ಬ ಮಗನ ಉಸಿರು ಇನ್ನೇನು ಕೆಲವೇ ಗಂಟೆಗಳಲ್ಲಿ ನಿಂತು ಹೋಗಲಿದೆ ಎಂದು ತಿಳಿದಾಗ ಆ ಅಪ್ಪ-ಅಮ್ಮನಿಗೆ ಅದೆಷ್ಟು ಆಘಾತ ಆಗುತ್ತದೆ ಎನ್ನುವುದನ್ನು ಶಬ್ದಗಳಿಂದ ವರ್ಣಿಸಲು ಅಸಾಧ್ಯ. ಆದರೆ ಈ ಅಪ್ಪ-ಅಮ್ಮ ಆ ಕ್ಷಣದಲ್ಲಿಯೂ ಬಹುದೊಡ್ಡ ನಿರ್ಧಾರ ತೆಗೆದುಕೊಂಡು ಬಿಟ್ಟರು.
ಕೂಡಲೇ ಬಾಲಕನ ಯಾವ್ಯಾವ ಅಂಗಾಂಗಳು ಸರಿಯಿವೆಯೋ ಅವೆಲ್ಲವನ್ನೂ ಅಗತ್ಯ ಇರುವವರಿಗೆ ದಾನ ಮಾಡಿಬಿಡಿ ಎಂದು ಹೇಳಿದರು. ಬಾಲಕನ ಮಿದುಳು ಸಂಪೂರ್ಣ ನಿಷ್ಕ್ರಿಯವಾದ ಮೇಲೆ ವೈದ್ಯರು ಕೂಡಲೇ ಕಾರ್ಯಪ್ರವೃತ್ತರಾಗಿ ಬಾಲಕನ ಹೃದಯ, ಕಣ್ಣು, ಎರಡು ಕೈಗಳು, ಶ್ವಾಸಕೋಶಗಳನ್ನು ತೆಗೆದರು. ಅದಾಗಲೇ ಇಬ್ಬರು ದೃಷ್ಟಿಯಿಲ್ಲದೇ ನರಳುತ್ತಿದ್ದರೆ, ಶ್ವಾಸಕೋಶ ಮತ್ತು ಹೃದಯ ಸಮಸ್ಯೆಯಿಂದ ಸಾಯುವ ಸ್ಥಿತಿಯಲ್ಲಿದ್ದರು ಇನ್ನಿಬ್ಬರು. ಮತ್ತಿಬ್ಬರಿಗೆ ಕೈಗಳ ಅಗತ್ಯವಿತ್ತು.
ಕೂಡಲೇ ವೈದ್ಯರು ಬಾಲಕನ ಈ ಅಂಗಾಂಗಗಳನ್ನು ಮುಂಬೈ, ಚೆನ್ನೈ, ಅಹ್ಮದಾಬಾದ್ಗೆ ಕಳುಹಿಸಿದರು. ‘ಗ್ರೀನ್ ಕಾರಿಡಾರ್’ ಮೂಲಕ ಅಂಗಾಂಗಗಳು ತಲುಪಿದವರು. ಧಾರ್ಮಿಕ್‌ನ ಹೃದಯವನ್ನು ಅಹಮದಾಬಾದ್‌ನ 11 ನೇ ತರಗತಿ ವಿದ್ಯಾರ್ಥಿಗೆ, ಶ್ವಾಸಕೋಶಗಳನ್ನು ಆಂಧ್ರಪ್ರದೇಶ ನಿವಾಸಿಗೆ, ಕಣ್ಣುಗಳನ್ನು ಸೂರತ್ ನಿವಾಸಿಗಳಿಗೆ, 2 ಕೈಗಳನ್ನು ಮುಂಬೈ ವ್ಯಕ್ತಿಗಳಿಗೆ ಜೋಡಿಸಲಾಗಿದೆ. 292 ಕಿ.ಮೀ. ದೂರವನ್ನು ಕೇವಲ 105 ನಿಮಿಷಗಳಲ್ಲಿ ತಲುಪಲು ವ್ಯವಸ್ಥೆ ಮಾಡಲಾಗಿತ್ತು.
Discussion about this post