ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ, ಜನಪ್ರಿಯ ಕಾರ್ಯಕ್ರಮ ಅಳವಡಿಸಲು ಆರ್‌ಕೆವಿವೈ ಯೋಜನೆಯಡಿ 7,234 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ2023ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ನಾನಾ ಯೋಜನೆಗಳನ್ನು ರೂಪಿಸುವ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
“ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ ಹಾಗೂ ಜನಪ್ರಿಯ ಕಾರ್ಯಕ್ರಮ ಅಳವಡಿಸಲು ಆರ್‌ಕೆವಿವೈ ಯೋಜನೆಯಡಿ 7,234 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ ಗ್ರಾ.ಪಂ.ಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ,” ಎಂದು ಅವರು ತಿಳಿಸಿದರು.
ಕೃಷಿ ಬೆಳೆಗಳು, ಬಿತ್ತನೆ ಬೀಜ, ತಂತ್ರಜ್ಞಾನಗಳು, ರೈತರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲು ಸೋಮವಾರ ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಕೊಯ್ಲೋತ್ತರ ನಿರ್ವಹಣೆಗಾಗಿ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಮತ್ತು ಸಾಮೂಹಿಕ ಕೃಷಿ ಆಸ್ತಿಯನ್ನು ಸೃಷ್ಟಿಸಲು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಬಡ್ಡಿಗೆ ಶೇ.3ರಂತೆ ಸಹಾಯಧನ ನೀಡಲಾಗುವುದು. ಯೋಜನೆಯ ಪ್ರಯೋಜನ ಪಡೆಯಲು ಅರ್ಹ ಫಲಾನುಭವಿಗಳು ಪ್ರಸ್ತಾವನೆಯನ್ನು ನೇರವಾಗಿ ಕೇಂದ್ರ ಸರಕಾರದ (ಎಐಎಫ್) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಅಥವಾ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬೇಕು,” ಎಂದು ಸಚಿವರು ವಿವರಿಸಿದರು.
ಅಕ್ರಮ ದಾಸ್ತಾನು ಜಪ್ತಿ
2021ರ ಏಪ್ರಿಲ್ 1 ರಿಂದ ಸೆ. 30ರವರೆಗೆ ಕೃಷಿ ವಿಚಕ್ಷಣಾ ದಳವು 1394 ಕ್ವಿಂಟಾಲ್ (415.78 ಲಕ್ಷ ರೂ. ಮೌಲ್ಯ) ಬಿತ್ತನೆ ಬೀಜಗಳ ಅಕ್ರಮ ದಾಸ್ತಾನನ್ನು ಜಪ್ತಿ ಮಾಡಿದೆ. 8,039 ಟನ್ ರಸಗೊಬ್ಬರ (145.32 ಲಕ್ಷ ರೂ.) ಮತ್ತು 4592 ಕೆ.ಜಿ ಕೀಟನಾಶಕ (640 ಲಕ್ಷ ರೂ.)ಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ 2021 – 22ನೇ ಸಾಲಿನಲ್ಲಿ 62,615 ಲಕ್ಷ ರೂ. (626.15 ಕೋಟಿ ರೂ.) ಮೌಲ್ಯದ ನಾನಾ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೀಟನಾಶಕ ಜಪ್ತಿಯಾಗಿದೆ ಎಂದರು ಬಿ.ಸಿ. ಪಾಟೀಲ್.
ಬೆಳೆ ವಿಮೆ, ರೈತ ವಿದ್ಯಾನಿಧಿಗೆ ಒತ್ತು
– ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 1,280 ಲಕ್ಷ ರೈತರ ನೋಂದಣಿ.
– ರೈತ ವಿದ್ಯಾನಿಧಿ ಯೋಜನೆಯಡಿ 8,931 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ 2.44 ಕೋಟಿ ರೂ. ವರ್ಗ.
– 2021ರ ಮುಂಗಾರು ಹಂಗಾಮಿನಲ್ಲಿ 77 ಲಕ್ಷ ಹೆಕ್ಟೇರ್ ಗುರಿ ಮೀರಿ 77.20 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ.
– 26,47,000 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, 35,416,06 ಲಕ್ಷ ಮೆಟ್ರಿಕ್ ಟನ್ ದಾಸ್ತಾನಿದೆ.
ಕೃಷಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜಕುಮಾರ್ ಖತ್ರಿ, ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Discussion about this post