ಮಾಹಿತಿ ಹಕ್ಕು ಕಾಯ್ದೆಯು ಜಾರಿಗೊಂಡು 16 ವರ್ಷಗಳಾಗಿರುವ ಸಂದರ್ಭದಲ್ಲಿ ‘ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫಾರ್ಮೇಷನ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನ್ಯಾ.ಲೋಕೂರ್, ಸಾಮಾನ್ಯ ಪ್ರಜೆಗಳು ಮತ್ತು ದೊಡ್ಡ ಉದ್ಯಮಿಗಳು ದೇಣಿಗೆಯಾಗಿ ನೀಡಿರುವ ಕೋಟ್ಯಂತರ ರೂ.ಗಳನ್ನು ಹೇಗೆ ವೆಚ್ಚ ಮಾಡಲಾಗುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ಲಭ್ಯವಾಗಿಸಿಲ್ಲವೇಕೆ ಎಂದು ಪ್ರಶ್ನಿಸಿದರು.
‘PM cares ನಿಧಿಗೆ ಜಮಾ ಮಾಡಿದ ದುಡ್ಡು ಎಲ್ಲಿಗೆ ಹೋಗುತ್ತಿದೆ ಎನ್ನುವುದು ನಮಗೆ ಗೊತ್ತಿಲ್ಲ. PM cares ನಿಧಿಯಲ್ಲಿ ಕೋಟ್ಯಂತರ ರೂ.ಗಳಿವೆ. ಸರಕಾರಿ ನೌಕರರು ದೇಣಿಗೆಗಳನ್ನು ನೀಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ದೇಣಿಗೆಗಳನ್ನು ಪಿಎಂ ಕೇರ್ಸ್ ಗೆ ಜಮಾ ಆಗುವಂತೆ ಮಾಡಲಾಗುತ್ತಿದೆ. ಆದರೆ ನಿಧಿಯಲ್ಲಿ ಎಷ್ಟು ಹಣವಿದೆ? ನಮಗೆ ಗೊತ್ತಿಲ್ಲ. ಅದನ್ನು ಹೇಗೆ ವ್ಯಯಿಸಲಾಗಿದೆ? ನಮಗೆ ಗೊತ್ತಿಲ್ಲ. ಕೋವಿಡ್ ಬಿಕ್ಕಟ್ಟನ್ನು ಎದುರಿಸಲು, ವೆಂಟಿಲೇಟರ್ಗಳನ್ನು ಖರೀದಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ನಮಗೆ ಹೇಳಲಾಗಿತ್ತು. ನಿಜವಾಗಿಯೂ ಆಗಿರುವುದೇನು? ನಮಗೆ ಗೊತ್ತಿಲ್ಲ’ ಎಂದು ಹೇಳಿದ ನ್ಯಾ.ಲೋಕೂರ್, ‘ಪಿಎಂ ಕೇರ್ಸ್ ವೆಬ್ಸೈಟ್ನಲ್ಲಿ 28-03-2020ರಿಂದ 31-03-2020ರ ಅವಧಿಯ ಲೆಕ್ಕ ಪರೀಶೋಧನೆ ವರದಿಯನ್ನು ನೋಡಬಹುದು. ನಾಲ್ಕು ದಿನಗಳಲ್ಲಿ 3,000 ಕೋ.ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಅದು ಹೇಳುತ್ತಿದೆ. ಅದನ್ನು ಸರಾಸರಿಯಾಗಿ ತೆಗೆದುಕೊಂಡರೆ ನಾವು ಸಾವಿರಾರು ಕೋಟಿ ರೂ.ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಆ ಹಣ ಎಲ್ಲಿಗೆ ಹೊಗುತ್ತಿದೆ? ನಮಗೆ ಗೊತ್ತಿಲ್ಲ’ ಎಂದರು.
2020-21ನೇ ಅವಧಿಯ ಲೆಕ್ಕ ಪರಿಶೋಧನೆ ವರದಿಯು ಇನ್ನೂ ಸಿದ್ಧಗೊಂಡಿಲ್ಲ. ಒಂದು ವರ್ಷ ಈಗಾಗಲೇ ಕಳೆದಿದೆ, ಆದರೆ ಲೆಕ್ಕ ಪರಿಶೋಧನೆ ವರದಿಯ ಬಗ್ಗೆ ಯಾರಿಗೂ ಸುಳಿವಿಲ್ಲ ಎಂದರು.
ಕೋವಿಡ್ ತುರ್ತು ಸ್ಥಿತಿಯನ್ನು ಎದುರಿಸಲು ಚ್ಯಾರಿಟೇಬಲ್ ಟ್ರಸ್ಟ್ ಆಗಿ ಸ್ಥಾಪಿಸಲಾದ ಪಿಎಂ ಕೇಸ್ ನಿಧಿಯ ಕುರಿತು ಮಾಹಿತಿ ಕೋರಿದ್ದ ಆರ್ಟಿಐ ಅರ್ಜಿಗಳನ್ನು ಪ್ರಧಾನಿ ಕಚೇರಿಯು ತಿರಸ್ಕರಿಸಿದ್ದನ್ನು ಮತ್ತು ಅದು ಆರ್ಟಿಐ ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪಿಎಂ ಕೇರ್ಸ್ ನಿಧಿಯ ಕುರಿತು ಮಾಹಿತಿ ಬಹಿರಂಗವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ನಡೆಸುತ್ತಿದೆ.
ಮಾಹಿತಿಯನ್ನು ಮುಕ್ತವಾಗಿ ಲಭ್ಯವಾಗಿಸುವುದರ ಮಹತ್ವದ ಕುರಿತೂ ಮಾತನಾಡಿದ ನ್ಯಾ.ಲೋಕೂರ್, ಪ್ರಜಾಸತ್ತಾತ್ಮಕ ಗಣರಾಜ್ಯವು ಸರಿಯಾಗಿ ಕಾರ್ಯ ನಿರ್ವಹಿಸಲು ಮಾಹಿತಿಗಳು ಮುಖ್ಯವಾಗಿವೆ. ಒಳ್ಳೆಯ ಆಡಳಿತ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೊಂದಿರುವುದು ಇದರ ಹಿಂದಿನ ಪರಿಕಲ್ಪನೆಯಾಗಿದೆ. ನಾವು ಮಾಹಿತಿಗಾಗಿ ಸರಕಾರವನ್ನು ಕೇಳಬೇಕಿಲ್ಲ. ಆರ್ಟಿಐ ಕಾಯ್ದೆಯ ಕಲಂ 4ರಡಿ ಸರಕಾರವು ತಾನಾಗಿಯೇ ಮಾಹಿತಿಗಳನ್ನು ಒದಗಿಸಬೇಕು ಎಂದರು.
Discussion about this post